ಗ್ಯಾಸ್ಟ್ರಾಪೊಡ -
ಮಾಲಸ್ಕ ವಂಶಕ್ಕೆ ಸೇರಿದ ಒಂದು ದೊಡ್ಡ ವರ್ಗ. 3500ಕ್ಕಿಂತ ಹೆಚ್ಚು ಜೀವಂತ ಪ್ರಭೇದಗಳನ್ನೂ 1500ಕ್ಕಿಂತ ಹೆಚ್ಚು ಲುಪ್ತಪ್ರಭೇದಗಳನ್ನೂ ಒಳಗೊಂಡಿದೆ. ಪ್ರಾಚೀನ ಜೀವಶಾಸ್ತ್ರದ ಪ್ರಕಾರ ಈ ವರ್ಗದ ಪ್ರಾಣಿಗಳು ಕೇಂಬ್ರಿಯನ್ ಕಾಲದಲ್ಲಿ ಉಗಮವಾಗಿ ಈವರೆಗೂ ವಿಕಾಸಗೊಂಡು ಬಂದಿವೆ. ಮಾಲಸ್ಕ ವಂಶದ ಪ್ರಾಣಿಗಳಲ್ಲಿ ಇವು ವಿಕಾಸದ ಉನ್ನತ ಮಜಲನ್ನು ಮುಟ್ಟಿದ್ದು ಆ ವಂಶದ ಉಳಿದೆಲ್ಲ ವರ್ಗಗಳ ಪ್ರಾಣಿಗಳಿಗಿಂತಲೂ ಈ ವರ್ಗದ ಪ್ರಾಣಿಗಳು ಅತಿ ಹೆಚ್ಚಿನ ಹೊಂದಾಣಿಕಾ ಪ್ರಸರಣವನ್ನು ತೋರುತ್ತವೆ. ನಾನಾರೀತಿಯ ಪರಿಸರಗಳಲ್ಲಿ ಬದುಕುವ ಸಾಮಥ್ರ್ಯವನ್ನು ಗಳಿಸಿಕೊಂಡಿರುವ ಇವು ಜಲ ನೆಲಗಳೆರಡರಲ್ಲೂ ಕಾಣಬರುತ್ತವೆ. ಕೆಲವು ಸಮುದ್ರದ ತಳಭಾಗದಲ್ಲಿ ವಾಸಿಸಿದರೆ, ಇನ್ನು ಕೆಲವು ತೇಲುಜೀವಿಗಳಾಗಿ ಬದುಕುತ್ತವೆ. ಸಿಹಿನೀರಿನ ಆಗರಗಳಲ್ಲಿ ಕೂಡ ಇವು ವಾಸಿಸುತ್ತವೆ. ಪಲ್ಮನೇಟ ಗಣಕ್ಕೆ ಸೇರಿದ ಬಸವನ ಹುಳುಗಳು ನೇರವಾಗಿ ಗಾಳಿಯನ್ನೇ ಉಸಿರಾಡಬಲ್ಲ ರಚನೆಗಳನ್ನು ರೂಪಿಸಿಕೊಂಡು ನೆಲದ ಮೇಲೆ ಬದುಕುವ ಶಕ್ತಿಯನ್ನು ಪಡೆದಿವೆ. ಇಲ್ಲಿ ಮ್ಯಾಂಟಲ್ ಕುಹರ ಪುಪ್ಪುಸವಾಗಿ ಮಾರ್ಪಟ್ಟಿದೆ.

ಉಗಮ ಮತ್ತು ವಿಕಾಸ: ಗ್ಯಾಸ್ಟ್ರಾಪೊಡಗಳಿಗೂ ಆದಿಮಾಲಸ್ಕಗಳಿಗೂ ರಚನೆಯಲ್ಲಿ ಹೆಚ್ಚಿನ ವ್ಯತ್ಯಾಸಗಳಿಲ್ಲ. ಆದರೆ ಈ ವರ್ಗದಲ್ಲಿ ಕಾಣುವ ಒಂದು ಮಹತ್ತ್ವದ ಬದಲಾವಣೆ ಎಂದರೆ ಶರೀರದ ನುಲಿಗೆ (ಟಾರ್ಷನ್). ನುಲಿಗೆಯಿಂದಾಗಿ ಶರೀರದ ಇತರ ಭಾಗಗಳೂ ತಿರುಚಿಕೊಂಡಿವೆ. ಆದಿಯಲ್ಲಿ ಇವುಗಳ ಚಿಪ್ಪು ಮಾತ್ರ ನುಲಿಗೆಗೆ ಒಳಗಾಗಿತ್ತು. ಪಳೆಯುಳಿಕೆಗಳ ಚಿಪ್ಪು ಸುರುಳಿಯಂತೆ ಸುತ್ತಿಕೊಂಡಿರುವುದು ಇದನ್ನು ವ್ಯಕ್ತಪಡಿಸುತ್ತದೆ. ನುಲಿಗೆ ಪೂರ್ವದ ಚಿಪ್ಪು (ಕಂಬು) ಸಮತಳ ಸುರುಳಿಯ ರೀತಿಯಲ್ಲಿತ್ತು. ಅಂದರೆ ಚಿಪ್ಪು ಶಂಕುವಿನಂತೆ ಇರದೆ ಪ್ರತಿಯೊಂದು ಸುರುಳಿಯೂ ಒಂದರ ಹೊರಗೆ ಒಂದರಂತೆ ಸಮತಲದಲ್ಲಿ ಜೋಡಿತವಾಗಿದ್ದುವು. ಕೇವಲ ಚಿಪ್ಪಿನ ತಿರುಚುವಿಕೆಯೇ ಅಲ್ಲದೆ ಇನ್ನೂ ಗುರುತರವಾದ ಬದಲಾವಣೆಗಳನ್ನು ನುಲಿಗೆ ಒಳಗೊಂಡಿದ್ದು ಜೀವಿಯ ಅಂಗಸಮೂಹ, ಮ್ಯಾಂಟಲ್ ಮತ್ತು ಮ್ಯಾಂಟಲ್ ಕುಹರಗಳು 180o ಅಪ್ರದಕ್ಷಿಣವಾಗಿ ಸುತ್ತಿಕೊಳ್ಳುವಂತೆ ಮಾಡಿದೆ. ಇದರಿಂದಾಗಿ ಮ್ಯಾಂಟಲ್ ಕುಹರ, ಕಿವಿರುಗಳು, ಗುದದ್ವಾರ ಮತ್ತು ಶುದ್ಧೀಕರಣ ರಂಧ್ರಗಳು ತಲೆಯ ಹಿಂದೆ ದೇಹದ ಮುಂಭಾಗಕ್ಕೆ ತೆರೆದುಕೊಳ್ಳುವಂತಾಗಿದೆ. ಜೀರ್ಣಾಂಗ ಮತ್ತು ನರಮಂಡಲಗಳು U-ಆಕೃತಿಯಲ್ಲಿ ಉಳಿದುಕೊಂಡಿವೆ. ಇಷ್ಟಾದರೂ ಚಿಪ್ಪು ಮಾತ್ರ ಸಮಮಿತಿಯ ಸುರುಳಿಯಂತೆ ಉಳಿದುಕೊಂಡಿದೆ. ಇವುಗಳ ಡಿಂಭ ಪ್ರಥಮದಲ್ಲಿ ದ್ವಿಪಾಶ್ರ್ವ ಸಮಮಿತಿಯನ್ನೊಳಗೊಂಡಿದ್ದು ಇದ್ದಕ್ಕಿದ್ದಂತೆಯೇ ನುಲಿಗೆಗೊಳಗಾಗುತ್ತದೆ. ಚಿತ್ರ 1 ನುಲಿಗೆ ಕೇವಲ ವಿಕಾಸದಿಂದಾದ ಕ್ರಿಯೆ ಅಲ್ಲ. ಏಕೆಂದರೆ ಈಗಿನ ಗ್ಯಾಸ್ಟ್ರಾಪೊಡಗಳ ಭ್ರೂಣದ ಬೆಳೆವಣಿಗೆಯ ಕಾಲದಲ್ಲಿಯೇ ಇದು ಕಂಡುಬರುತ್ತದೆ. ನುಲಿಗೆಯ ವಿಕಾಸದ ಮಹತ್ತ್ವವನ್ನು ಅರಿಯಲು ನಾನಾ ಸಿದ್ಧಾಂತಗಳನ್ನು ಪ್ರತಿಪಾದಿಸಲಾಗಿದೆ. ಇದು ಡಿಂಭಗಳ ಬೆಳವಣಿಗೆಯ ಹಂತದಲ್ಲಿ ಕಂಡುಬರುವುದರಿಂದ ಈ ಕ್ರಿಯೆ ಒಂದು ರೀತಿಯ ಡಿಂಭದ ಹೊಂದಿಕೆಯಿಂದ ಗಾರ್‍ಸ್ಟ್ರಂಗ್ ಎಂಬಾತ ಪ್ರತಿಪಾದಿಸಿದ (1928). ನುಲಿಗೆಗಿಂತ ಮೊದಲು ಶಿಲಕಾವೃತವಾದ ನೀಲಂ ಎಂಬ ಚಲನಾಂಗವನ್ನು ಡಿಂಭದ ಮ್ಯಾಂಟಲ್ ಕುಹರದೊಳಕ್ಕೆ ಎಳೆದುಕೊಳ್ಳುವುದಕ್ಕೆ ಸಾಧ್ಯವಿರಲಿಲ್ಲ. ಏಕೆಂದರೆ ಡಿಂಭದ ಪಾದ ಈ ಕ್ರಿಯೆಗೆ ಅಡ್ಡಿಬರುತ್ತಿತ್ತು. ಆದರೆ ತಿರುಚುವಿಕೆಯಿಂದ ಮ್ಯಾಂಟಲ್ ಕುಹರ ಶರೀರದ ಮುಂಬದಿಗೆ ಸರಿದು ಡಿಂಭ ತನ್ನ ವೀಲಮ್ ಅನ್ನು ಒಳಕ್ಕೆಳೆದುಕೊಳ್ಳಲು ಅನುಕೂಲವಾಯಿತು. ಚಲಿಸುತ್ತಿರುವ ಡಿಂಭ ಶತ್ರುವಿನ ಕೈಗೆ ಸಿಕ್ಕಾಗ ತನ್ನ ವೀಲಂ ಅನ್ನು ಒಳಗೆಳೆದುಕೊಂಡು ನೀರಿನ ತಳಕ್ಕೆ ಮುಳುಗಿ ಶತ್ರುದಾಳಿಯಿಂದ ತಪ್ಪಿಸಿಕೊಳ್ಳುತ್ತಿತ್ತು. ಹೀಗೆ ಈ ಕ್ರಿಯೆ ಡಿಂಭದ ಉಳಿವಿಗೆ ಅಗತ್ಯವಾಗಿತ್ತು. ಆದರೆ ನುಲಿಗೆ ಕ್ರಿಯೆಯಿಂದ ವಯಸ್ಕ ಜೀವಿಗೆ ಯಾವ ಅನುಕೂಲವೂ ಇಲ್ಲ. ಬದಲಿಗೆ ವಯಸ್ಕ ಜೀವಿಗಳಲ್ಲಿ ಈ ಕ್ರಿಯೆ ಬಹಳ ಸಮಸ್ಯೆಗಳ ಉದ್ಭವಕ್ಕೆ ಕಾರಣವಾಗಿವೆ.

ಆಧುನಿಕ ಸಿದ್ಧಾಂತದ ಪ್ರಕಾರ ನುಲಿಗೆ ಡಿಂಭಗಳ ಹೊಂದಿಕೆ ಅಲ್ಲ, ಬದಲಾಗಿ ಇದು ವಯಸ್ಕ ಜೀವಿಗಳ ಹೊಂದಿಕೆ ಮತ್ತು ಗ್ಯಾಸ್ಟ್ರಾಪೊಡ ಜೀವಿಗಳು ಇತರ ಜೀವಿಗಳಂತೆಯೇ ಪರಿಸರದೊಡನೆ ಹೊಂದಿಕೊಳ್ಳಲು ಪ್ರಯತ್ನ ನಡೆಸಿದಾಗ ಉದ್ಭವವಾದ ಕ್ರಿಯೆ. ನುಲಿಗೆಗೊಳಗಾಗದ ಅಥವಾ ನುಲಿಗೆಯ ಪೂರ್ವಸ್ಥಿತಿಯಲ್ಲಿದ್ದ ಜೀವಿಗಳಲ್ಲಿ ಮ್ಯಾಂಟಲ್ ಕುಹರದ ತೆರವು, ಗುದದ್ವಾರ, ಕಿವಿರುಗಳು ಮತ್ತು ಶುದ್ಧೀಕರಣರಂಧ್ರಗಳು ಪ್ರಾಣಿಯ ಹಿಂಭಾಗದಲ್ಲಿದ್ದವು. ಪ್ರಾಣಿ ಚಲಿಸುವಾಗ ಉತ್ಪತ್ತಿಯಾಗುತ್ತಿದ್ದ ನೀರಿನ ಪ್ರವಾಹ ದೇಹದ ಮುಂಬದಿಯಿಂದ ಹಿಂಬದಿಗೆ ಹರಿಯುತ್ತಿತ್ತು. ಇದರಿಂದಾಗಿ ನೀರನ್ನು ಮ್ಯಾಂಟಲ್ ಕುಹರದೊಳಕ್ಕೆ ವಿರುದ್ಧ ದಿಕ್ಕಿನಿಂದ ಎಳೆದುಕೊಳ್ಳಬೇಕಾಗಿತ್ತು. ನುಲಿಗೆಯಿಂದಾಗಿ ಮ್ಯಾಂಟಲ್ ಕುಹರ ದೇಹದ ಮುಂಭಾಗಕ್ಕೆ ಬಂದದ್ದರಿಂದ ನೀರು ಮ್ಯಾಂಟಲ್ ಕುಹರದೊಳಕ್ಕೆ ನುಗ್ಗಿ ಹೊರಬರುವಂತಾಯಿತು. ಉಸಿರಾಟಕ್ಕೆ ಹಾಗೂ ತ್ಯಾಜ್ಯ ವಸ್ತುಗಳನ್ನು ಹೊರಹಾಕುವುದಕ್ಕೆ ಇದರಿಂದ ಅನುಕೂಲವಾಯಿತು. ಈ ಸಿದ್ಧಾಂತಕ್ಕೂ ಬಹಳ ಇತಿಮಿತಿಗಳಿವೆ. ಏಕೆಂದರೆ ಬಹುಪಾಲು ಮಾಲಸ್ಕ ಜೀವಿಗಳಲ್ಲಿ ನೀರನ್ನು ಒಳಗೆಳೆದುಕೊಳ್ಳಲು ಮತ್ತು ಹೊರಹಾಕಲು ಮ್ಯಾಂಟಲ್ ಕುಹರದಲ್ಲಿ ಶಿಲಕೆಗಳಿಂದ ತುಂಬಿದ ಕೊಳವೆಗಳಂಥ ರಚನೆಗಳಿವೆ. ಇದರಿಂದ ಇವು ತಮಗೆ ಬೇಕೆಂದ ದಿಕ್ಕಿನಿಂದ ನೀರನ್ನು ತೆಗೆದುಕೊಂಡು ಹೊರಹಾಕಬಲ್ಲವು. ಗ್ಯಾಸ್ಟ್ರಾಪೊಡದಲ್ಲಿಯೂ ಇಂಥ ರಚನೆಗಳು ಕಂಡುಬರುತ್ತವೆ. ನುಲಿಗೆ ಗ್ಯಾಸ್ಟ್ರಾಪೊಡಗಳ ಹೊಂದಾಣಿಕಾ ಸಾಮಥ್ರ್ಯವನ್ನು ಹೆಚ್ಚಿಸಿದೆಯೇ ಎನ್ನುವುದು ಖಚಿತವಾಗಿಲ್ಲ.
ನುಲಿಗೆಯನ್ನು ಪ್ರದರ್ಶಿಸುವ ಪ್ರಾಣಿಯಲ್ಲಿ ಇದರಿಂದ ನಾನಾರೀತಿಯ ಕ್ರಿಯಾ ಸಂಬಂಧಿ ಸಮಸ್ಯೆಗಳು ಹುಟ್ಟಿಕೊಂಡಿವೆ. ಇವುಗಳಲ್ಲಿ ಅತಿ ಮುಖ್ಯವಾದ್ದು ಮ್ಯಾಂಟಲ್ ಕುಹರದೊಳಕ್ಕೆ ತುಂಬಿಕೊಳ್ಳುವ ಮಲಿನ ಪದಾರ್ಥಗಳನ್ನು ಆದಿಮಾಲಸ್ಕ ಜೀವಿಗಳು ಹೇಗೆ ಹೊರಹಾಕುತ್ತಿದ್ದುವು ಎಂಬುದು. ಇವುಗಳ ಮ್ಯಾಂಟಲ್ ಕುಹರದಲ್ಲಿ ನೀರು ಉಳಿಯುವಂತೆ ಗ್ಯಾಸ್ಟ್ರಾಪೊಡಗಳಲ್ಲೂ ನೀರು ಉಳಿದರೆ ಗುದದ್ವಾರದಿಂದ ಮತ್ತು ನೆಫ್ರೀಡಿಂiÀiಗಳಿಂದ ಬರುವ ತ್ಯಾಜ್ಯವಸ್ತುಗಳೆಲ್ಲವನ್ನೂ ತಲೆಯ ಮೇಲೆಯೇ ಸುರಿದುಕೊಳ್ಳಬೇಕಾಗುತ್ತದೆ. ನಿಮ್ನ ರೀತಿಯ ಪ್ರಭೇದಗಳು ಮ್ಯಾಂಟಲ್ ಕುಹರದ ಮೇಲ್ಭಾಗದಲ್ಲಿ ಒಂದು ರೀತಿಯ ಸೀಳುಗಾಲುವೆಯಂಥ ರಚನೆಯನ್ನು ರೂಪಿಸಿಕೊಂಡು ಗುದದ್ವಾರವನ್ನು ಮ್ಯಾಂಟಲ್ ಕುಹರದ ತುದಿಯಿಂದ ಒಳಗೆಳೆದುಕೊಂಡು ಈ ಸೀಳುಗಾಲುವೆಯ ತಳದ ಒಂದು ಭಾಗಕ್ಕೆ ತೆರೆದುಕೊಳ್ಳುವಂತೆ ಮಾಡಿಕೊಂಡು ಈ ಸಮಸ್ಯೆಯನ್ನು ಪರಿಹರಿಸಿಕೊಂಡಿವೆ. ಇದರಿಂದಾಗಿ ನೀರು ತಲೆಯ ಮೇಲಿಂದ ಒಳನುಗ್ಗಿ ಕಿವಿರುಗಳ ಮೇಲೆ ಹರಿದು ತಾನು ಪ್ರವೇಶಿಸಿದ ದಿಕ್ಕಿನಲ್ಲಿಯೇ ಸೀಳುಗಾಲುವೆಯ ಮೂಲಕ ಹೊರಬರುತ್ತದೆ. ಹೀಗೆ ಹೊರಬರುವಾಗ ಗುದದ್ವಾರದಿಂದ ಮತ್ತು ನೆಫ್ರೀಡಿಯಗಳಿಂದ ಉತ್ಪತ್ತಿಯಾಗುವ ವಸ್ತುಗಳನ್ನು ಹೊರಸಾಗಿಸುತ್ತದೆ.
ಹೆಚ್ಚು ವಿಕಾಸಗೊಂಡ ಗ್ಯಾಸ್ಟ್ರಾಪೊಡಗಳಲ್ಲಿ ಕೊನೆಯ ಹಂತದ ಬದಲಾವಣೆಯೆಂದರೆ ಚಿಪ್ಪಿನಲ್ಲಾದ ಬದಲಾವಣೆ. ಲುಪ್ತಪ್ರಭೇದಗಳಲ್ಲಿ ಸಮತಳ ಸುರುಳಿ ಸಮಮಿತಿಯ ಚಿಪ್ಪುಗಳಿದ್ದರೂ ಜೀವಂತವಾಗಿರುವ ಎಲ್ಲ ಪ್ರಭೇದಗಳ ಚಿಪ್ಪುಗಳೂ ಅಸಮಮಿತಿಯನ್ನೊಳಗೊಂಡಿವೆ. ಇಲ್ಲೂ ಕೆಲವು ಚಿಪ್ಪುಗಳಲ್ಲಿ ಸಮಮಿತಿಯಿದೆಯಾದರೂ ಅದನ್ನು ಅವು ದ್ವಿತೀಯಕವಾಗಿ ಗಳಿಸಿಕೊಂಡಿವೆ. ಸಮತಳ ಸುರುಳಿಯ ಚಿಪ್ಪು ಕೆಲವು ನ್ಯೂನತೆಗಳನ್ನೊಳಗೊಂಡಿತ್ತು. ಇದು ಒತ್ತಾಗಿ ಅಥವಾ ಅಚ್ಚುಕಟ್ಟಾಗಿ ಜೋಡಿಸಿಕೊಂಡಿರಲಿಲ್ಲ. ಏಕೆಂದರೆ ಪ್ರತಿಯೊಂದು ಸುರುಳಿಯೂ ತನ್ನ ಹಿಂದಿನ ಸುರುಳಿಯ ಹೊರಗೆ ಇರುತ್ತಿತ್ತು. ಇದರಿಂದಾಗಿ ಚಿಪ್ಪಿನ ಸುತ್ತಳತೆ ಬಹಳ ಹೆಚ್ಚಾಗಿರುತ್ತಿತ್ತು. ಈ ಸಮಸ್ಯೆ ಅಸಮಮಿತಿಯ ಸುರುಳಿಯುಳ್ಳ ಚಿಪ್ಪುಗಳ ಪ್ರಾಣಿಗಳಲ್ಲಿಲ್ಲ. ಇಂಥ ಚಿಪ್ಪಿನಲ್ಲಿ ಸುರುಳಿಗಳು ಕೇಂದ್ರ ಅಕ್ಷವೊಂದರ ಸುತ್ತಲೂ ಒಂದರ ಮೇಲೊಂದರಂತೆ ಜೋಡಿತವಾಗಿರುವುದರಿಂದ ಚಿಪ್ಪಿನ ಸುತ್ತಳತೆ ಹೆಚ್ಚಾಗಿ ಹಿಗ್ಗಲು ಸಾಧ್ಯವಿಲ್ಲ. ಆದರೆ ಇಂಥ ಚಿಪ್ಪಿನಲ್ಲಿ ಶರೀರದ ತೂಕ ಒಂದೇ ಕಡೆಗೆ ಬೀಳುವ ಸಂಭವ ಇದೆ. ಸಮತಳ ಸುರುಳಿ ಚಿಪ್ಪಿನಲ್ಲಿ ಇಂಥ ಸಂಭಾವ್ಯತೆ ಇರಲಿಲ್ಲ. ತೂಕವನ್ನು ಸಮವಾಗಿರಿಸಲು ಚಿಪ್ಪಿನ ಸ್ಥಾನ ಸ್ವಲ್ಪಮಟ್ಟಿಗೆ ಬದಲಾಗಿದೆ. ಇದರ ನೀಳ ಅಕ್ಷರೇಖೆ ಮೇಲೆ ಹೋದಂತೆ ಹಿಂಬದಿಗೆ ಬಾಗಿರುವುದರಿಂದ ದೇಹದ ನೀಳ ಅಕ್ಷ ವಿಷಮ ದಿಕ್ಕಿಗೆ ಬಾಗಿದೆ. ಈ ರೀತಿಯ ಚಿಪ್ಪಿನ ಬಾಗುವಿಕೆಯನ್ನು ಈಗ ಬದುಕಿರುವ ಎಲ್ಲ ಗ್ಯಾಸ್ಟ್ರಾಪೊಡಗಳಲ್ಲಿ ಕಾಣಬಹುದು. ಚಿಪ್ಪಿನ ಈ ಹೊಸ ಸ್ಥಾನದಿಂದ ಮ್ಯಾಂಟಲ್ ಕುಹರ ದೇಹದ ಒಂದು ಭಾಗಕ್ಕೆ ಮಾತ್ರ ಸೀಮಿತಗೊಳ್ಳುವಂತಾಯಿತು. ಇದರ ವಿರುದ್ಧ ದಿಕ್ಕಿನ ದೇಹಭಾಗ ಚಿಪ್ಪಿನ ಗೋಡೆಗೆ ಒತ್ತಿಕೊಂಡಂತೆ ಇದೆ. ಈ ಒತ್ತುವಿಕೆಯಿಂದ ದೇಹದ ಮೇಲೆ ಮಹತ್ತರ ಪರಿಣಾಮವುಂಟಾಗಿದೆ. ಯಾವ ಭಾಗ ಚಿಪ್ಪಿನ ಕಡೆಗೆ ಒತ್ತಿಕೊಂಡಂತಿದೆಯೊ ಆ ಭಾಗದ ಗಾತ್ರ ಕುಗ್ಗಿದೆ. ಆ ಭಾಗದ ಕಿವಿರು, ಹೃತ್ಕರಣ, ಮೂತ್ರಕೋಶಗಳೆಲ್ಲ ನಶಿಸಿಹೋಗಿವೆ.
ಆಧುನಿಕ ಗ್ಯಾಸ್ಟ್ರಾಪೊಡಗಳಲ್ಲಿ ಶಂಕುವಿನಾಕಾರದ ಚಿಪ್ಪಿನ ವಿಕಾಸವಾದ ಮೇಲೆ ಮೂರು ಬಗೆಗಳಲ್ಲಿ ದೇಹದ ನೈರ್ಮಲ್ಯಕ್ರಿಯೆಯ ಸಮಸ್ಯೆಯನ್ನು ಇವು ಪರಿಹರಿಸಿಕೊಂಡಿವೆ. ಮೊದಲನೆಯದು ಆದಿ ಗ್ಯಾಸ್ಟ್ರಾಪೊಡಗಳಲ್ಲಿದ್ದ ಮ್ಯಾಂಟಲ್ ಕುಹರದಲ್ಲಿ ಕಾಲುವೆಯನ್ನು ಉಳಿಸಿಕೊಂಡಿರುವುದು ಅಥವಾ ಚಿಪ್ಪಿನಲ್ಲಿ ರಂಧ್ರಗಳಿರುವುದು. ಎರಡನೆಯದು ನುಲಿಗೆ ಕ್ರಿಯೆಯಿಂದ ಉಳಿದ ಒಂದೇ ಕಿವಿರನ್ನು ಹೊಸ ಮ್ಯಾಂಟಲ್ ಕುಹರದೊಳಕ್ಕೆ ಬೆಳೆಸಿಕೊಂಡು ನೀರಿನ ಚಲನೆಯನ್ನು ತಲೆಯ ಪಕ್ಕಕ್ಕೆ ಸೀಮಿತಗೊಳಿಸಿರುವುದು. ಮೂರನೆಯದು ವಿನುಲಿಗೆ (ಡಿಟಾರ್ಷನ್). ಇದು ನುಲಿಗೆಗೆ ವ್ಯತಿರಿಕ್ತವಾದ್ದು. ವಿನುಲಿಗೆಯಿಂದಾಗಿ ಮ್ಯಾಂಟಲ್ ಕುಹರ ಮತ್ತು ಗುದದ್ವಾರಗಳು ಪ್ರಾಣಿಯ ಹಿಂಬದಿಗೆ ಬಂದಿವೆ. ಅಲ್ಲದೆ ದೇಹಕ್ಕೆ ದ್ವಿತೀಯಕ ಸಮಪಾಶ್ರ್ವ ಸಮಮಿತಿ ಬಂದಿದೆ.
ನುಲಿಗೆಯ ಆಧಾರದ ಮೇಲೆ ಗ್ಯಾಸ್ಟ್ರಾಪೊಡ ವರ್ಗವನ್ನು ಮೂರು ಉಪವರ್ಗಗಳಾಗಿ ವಿಂಗಡಿಸಬಹುದು. ಮೊದಲನೆಯದು ಪ್ರೋಸೋಬ್ರ್ಯಾಂಕಿಯ. ಇವು ಮ್ಯಾಂಟಲ್ ಕುಹರದೊಳಗಿರುವ ಕಿವಿರುಗಳಿಂದ ಉಸಿರಾಡುತ್ತವೆ. ಇವುಗಳ ಕಿವಿರು ಮತ್ತು ಗುದದ್ವಾರ ದೇಹದ ಮುಂಭಾಗದಲ್ಲಿದೆ. ಅಂದರೆ ಇವುಗಳಲ್ಲಿ ನುಲಿಗೆ ಕ್ರಿಯ ಇದೆ ಎಂದಾಯಿತು. ಜೀವಂತ ಗ್ಯಾಸ್ಟ್ರಾಪೊಡಗಳ ಬಹುಪಾಲು ಪ್ರಭೇದಗಳು ಈ ಉಪವರ್ಗಕ್ಕೆ ಸೇರಿವೆ. ಎರಡನೆಯ ಉಪವರ್ಗವಾದ ಪಲ್ಮನೇಟಕ್ಕೆ ಬಸವನ ಹುಳು, ಶಂಭುಕಗಳು ಸೇರಿವೆ. ಇವು ಭೂವಾಸಿಗಳು. ಇವುಗಳ ಗುದದ್ವಾರ ಮತ್ತು ಮ್ಯಾಂಟಲ್ ಕುಹರಗಳು ದೇಹದ ಮುಂಭಾಗದಲ್ಲೇ ಕೆಲಸ ಮಾಡುತ್ತದೆ. ಮೂರನೆಯ ಉಪವರ್ಗ ಒಫಿಸ್ತೊಬ್ರ್ಯಾಂಕಿಯ. ಇದಕ್ಕೆ ಸೇರಿದ ಪ್ರಾಣಿಗಳಲ್ಲಿ ನಾನಾ ಹಂತಗಳ ವಿನುಲಿಗೆ ಕಂಡುಬರುತ್ತದೆ. ಬಹುಪಾಲು ಜೀವಿಗಳು ದ್ವಿತೀಯಕವಾಗಿ ಸಮಪಾಶ್ರ್ವ ಸಮಮಿತಿಯನ್ನು ಗಳಿಸಿಕೊಂಡಿವೆ. ಇವುಗಳ ಚಿಪ್ಪು ಚಿಕ್ಕವಾಗಿರಬಹುದು ಅಥವಾ ಸಂಪೂರ್ಣವಾಗಿ ನಶಿಸಿಹೋಗಿರಬಹುದು. ಇವು ನೀರಿನಲ್ಲಿ ಈಜಿಕೊಂಡು ಅಥವಾ ತೇಲಿಕೊಂಡು ಬದುಕುತ್ತವೆ. ಕಡಲ ಮೊಲಗಳೂ ನ್ಯೂಡಿಬ್ರ್ಯಾಂಕ್‍ಗಳೂ ಈ ಉಪವರ್ಗದ ಉದಾಹರಣೆಗಳು.
ಚಿಪ್ಪು ಮತ್ತು ಮ್ಯಾಂಟಲ್; ಗ್ಯಾಸ್ಟ್ರಾಪೊಡಗಳ ಪ್ರರೂಪಿ ಚಿಪ್ಪು ಸುರುಳಿ ಸುತ್ತಿದ ನಳಿಕೆಯಂತಿರುವ ಶಂಖಾಕೃತಿಯ ಕವಚ. ಇದರೊಳಗೆ ಪ್ರಾಣಿಯ ಎಲ್ಲ ಅಂಗವ್ಯೂಹಗಳೂ (ಅಂಗಸ) ಇವೆ. ಶಂಖಿನಂತಿರುವ ಚಿಪ್ಪಿನ ತುದಿಯಲ್ಲಿ ಅತಿ ಚಿಕ್ಕದಾದ ಪ್ರಥಮ ಸುರುಳಿ ಇದೆ. ಇದೇ ಅತಿ ವಯಸ್ಸಾದ ಸುರುಳಿ. ಇದಾದ ಮೇಲೆ ಇನ್ನುಳಿದ ಅನುಕ್ರಮ ಸುರುಳಿಗಳು ಚಿಪ್ಪಿನ ಲಂಬದ ಅಕ್ಷರೇಖೆಯ ಸುತ್ತಲೂ ಸುತ್ತಿಕೊಂಡಿವೆ. ಈ ಅಕ್ಷರೇಖೆಗೆ ಕಾಲುಮೆಲ ಎಂದು ಹೆಸರು. ಕೊನೆಯ ಸುರುಳಿ ದೊಡ್ಡದಾಗಿದ್ದು ಅದಕ್ಕೊಂದು ಅಗಲವಾದ ರಂಧ್ರವಿದೆ. ಇದರ ಮೂಲಕ ಪ್ರಾಣಿ, ಕಲೆ ಮತ್ತು ಪಾದಗಳನ್ನು ಹೊರಚಾಚುತ್ತದೆ. ಶಂಖಿನಂತಿರುವ ಚಿಪ್ಪಿನ ಸುರುಳಿ ಎಡಮುರಿ ಅಥವಾ ಬಲಮುರಿಸ್ಥಿತಿಯಲ್ಲಿರಬಹುದು. ಬಲಮುರಿ ಬಗೆಯಲ್ಲಿ ಶಂಖಿನ ರಂಧ್ರ ಕಾಲುಮೆಲದ ಬಲಭಾಗಕ್ಕೆ ತೆರೆದುಕೊಳ್ಳುತ್ತದೆ. ಎಡಮುರಿಯದರಲ್ಲಿ ಶಂಖಿನ ರಂಧ್ರ ಕಾಲುಮೆಲದ ಎಡಭಾಗಕ್ಕೆ ತೆರೆದುಕೊಳ್ಳುತ್ತದೆ.
ಶಂಖಿನ ಸುರುಳಿಯ ಪ್ರಥಮ ಆವರಣವನ್ನು ಈ ಪ್ರಾಣಿಗಳ ಡಿಂಭಗಳು ಉತ್ಪಾದಿಸುತ್ತವೆ. ಈ ಭಾಗಕ್ಕೆ ಪ್ರೋಟೋಕಾಂಕ್ ಎಂದು ಹೆಸರು. ಶಂಖಿನ ಇತರ ಭಾಗಗಳಿಗಿಂತ ಇದು ವಿಭಿನ್ನವಾಗಿರುತ್ತದೆ. ಇದರಲ್ಲಿ ಯಾವ ರೀತಿಯ ಕುಸುರಿ ರಚನೆಗಳಿರುವುದಿಲ್ಲ. ಇನ್ನುಳಿದ ಭಾಗಗಳು ಒಂದೇ ರೀತಿಯ ರಚನೆಯನ್ನು ತೋರುತ್ತವೆ. ಪ್ರಾಣಿಯ ಮ್ಯಾಂಟಲಿನ ತುದಿಯಿಂದ ಶಂಖು ಅಥವಾ ಚಿಪ್ಪು ಉತ್ಪತ್ತಿಯಾಗುತ್ತದೆ.

ಶಂಖುವಿನಲ್ಲಿ ಮೂರು ಪದರಗಳನ್ನು ನೋಡಬಹುದು: ಹೊರಗಿನ ಪೆರಿ-ಆಸ್ಟ್ರಕಮ್, ಮಧ್ಯದ ಪ್ರಿಸ್ಮ್ಯಾಟಿಕ್ ಮತ್ತು ಒಳಗಡೆಯ ನೆಕ್ರಿಯಸ್ ಪದರಗಳು. ಪೆರಿ-ಆಸ್ಟ್ರಕಮ್ ಪದರ ತೆಳುವಾಗಿದೆ. ಇದರಲ್ಲಿ ಗಡುಸಾಗಿರುವ, ಜಡ್ಡುಗಟ್ಟಿದ ಸಾವಯವ ವಸ್ತುವಿನಿಂದಾದ ಕಾಂಕಿಯೋಲಿನ್ ಎಂಬ ವಸ್ತುವಿದೆ. ಉಳಿದೆರಡು ಪದರಗಳು ಕ್ಯಾಲ್ಸಿಯಮ್ ಕಾರ್ಬೊನೇಟಿನಿಂದ ರಚಿತವಾಗಿದೆ. ಪ್ರಿಸ್ಮ್ಯಾಟಿಕ್ ಪದರದಲ್ಲಿ ಕ್ಯಾಲ್ಸಿಯಂ ಕಾರ್ಬೊನೇಟ್ ಹರಳುಗಳು ನೀಳವಾಗಿ ಜೋಡಿತವಾಗಿವೆ. ನೆಕ್ರಿಯಸ್ ಪದರದಲ್ಲಿ ತೆಳ್ಳಗಿರುವ ಮತ್ತು ಹೊಳೆಯುತ್ತಿರುವ ಹಾಳೆಗಳಂಥ ರಚನೆಗಳಿವೆ.

ಗ್ಯಾಸ್ಟ್ರಾಪೊಡಗಳ ಚಿಪ್ಪುಗಳಿಗೆ ನಾನಾರೀತಿಯ ಬಣ್ಣಗಳಿವೆ. ಶಂಖಿನ ರಚನೆ, ಅದರಲ್ಲಿರುವ ಕುಸುರಿ ಕೆಲಸಗಳು ಮತ್ತು ಆಕಾರ, ವೈವಿಧ್ಯತೆಗಳಿಂದ ಕೂಡಿವೆ. ಆದರೆ ಇಲ್ಲಿ ಕೆಲವು ಮುಖ್ಯ ಮಾರ್ಪಾಟುಗಳನ್ನೊಳಗೊಂಡಿರುವ ಚಿಪ್ಪುಗಳ ವಿಚಾರವನ್ನು ಮಾತ್ರ ಪ್ರಸ್ತಾಪಿಸಲಾಗಿದೆ. ಬಹುಪಾಲು ಪ್ರಭೇದಗಳಲ್ಲಿ ಜೀವಿ ಎಳೆಯದಾಗಿದ್ದಾಗ ಮಾತ್ರ ಸುರುಳಿಯಂತಿರುವ ಚಿಪ್ಪು ಇರುತ್ತದೆ. ವಯಸ್ಕ ಜೀವಿಗಳಲ್ಲಿ ಸುರುಳಿ ರಚನೆ ಮಾಯವಾಗುತ್ತದೆ. ಹ್ಯಾಲಿಯೋಟಿಸ್ ಮತ್ತು ಕ್ರೆಪಿಡ್ಯುಲಗಳಲ್ಲಿ ಚಿಪ್ಪು ಇನ್ನೂ ಅಸಮಮಿತಿಯಲ್ಲಿಯೇ ಉಳಿದಿದೆ. ಲಿಂಪೆಟ್‍ಗಳಲ್ಲಿ ಲಿಂಪೆಟ್‍ಗಳಲ್ಲಿ (ಪಟೆಲ) ಚಿಪ್ಪು ಚೀಣೀಯರ ಟೋಪಿಯಂತೆ ಇದ್ದು ದ್ವಿತೀಯಕ ಸಮಮಿತಿಯನ್ನು ಗಳಿಸಿಕೊಂಡಿದೆ. ವರ್ಮಿಟಿಡೀ ಕುಟುಂಬದ ಜೀವಿಗಳಲ್ಲಿ ಚಿಪ್ಪು ಎಳೆಯ ಪ್ರಾಣಿಗಳಲ್ಲಿ ಉಳಿದವುಗಳ ಚಿಪ್ಪಿನಂತೆಯೇ ಸುತ್ತಿಕೊಂಡಿರುತ್ತದೆ. ಆದರೆ, ಪ್ರಾಣಿ ಬೆಳೆದಂತೆ ಪ್ರತಿ ಸುರುಳಿಯೂ ಬೇರೆಬೇರೆಯಾಗುತ್ತ ಬಂದು ಪ್ರಬುದ್ಧಾವಸ್ಥೆಯಲ್ಲಿ ಕಾರ್ಕ್-ಸ್ಕ್ರೂವಿನಂತೆ ಆಗುತ್ತದೆ.

ಚಿಪ್ಪಿನ ಗಾತ್ರ ಕಡಿಮೆಯಾಗುವುದನ್ನು ಇಲ್ಲವೇ ಸಂಪೂರ್ಣವಾಗಿ ನಶಿಸಿಹೋಗುವುದನ್ನು ಕೆಲವು ಪ್ರಭೇದಗಳಲ್ಲಿ ಕಾಣಬಹುದು. ಪ್ರೋಸೋ ಬ್ರ್ಯಾಂಕಿಯ ಉಪವರ್ಗದ ಸೈನಮ್ ಎಂಬುದರಲ್ಲಿ ಪಾದ ಮತ್ತು ಮ್ಯಾಂಟಲ್‍ಗಳು ಅಗಲವಾಗಿದ್ದು ಚಿಪ್ಪಿನ ಮೇಲೆ ಮಡಿಸಿಕೊಂಡ ಒಂದು ರೀತಿಯ ಹೊದಿಕೆಯಂತಿವೆ. ಇದರಿಂದ ಚಿಪ್ಪು ಹೊರಕ್ಕೆ ಕಾಣುವುದಿಲ್ಲ. ಭೂಚರ ಪಲ್ಮನೇಟಗಳಲ್ಲೂ ಈ ಬಗೆಯ ಮಾರ್ಪಾಟನ್ನು ಕಾಣಬಹುದು. ಲೈಮ್ಯಾಕ್ಸ್, ಫಿಲೊ ಮೈಕಸ್ ಮುಂತಾದವುಗಳಲ್ಲಿ ಚಿಪ್ಪು ಬಹಳವಾಗಿ ಕುಗ್ಗಿ ಮ್ಯಾಂಟಲಿನೊಳಗೆ ಹುದುಗಿಹೋಗಿದೆ.

ಚಿಪ್ಪಿನ ಕ್ಷೀಣತೆ ಒಫಿಸ್ತೊಬ್ರ್ಯಾಂಕುಗಳ ಒಂದು ಮುಖ್ಯ ಗುಣ. ಇಲ್ಲಿ ಚಿಪ್ಪಿನ ಕ್ಷೀಣತೆಗೂ ವಿನುಲಿಗೆ ಕ್ರಿಯೆಗೂ ಒಂದು ರೀತಿಯ ಸಂಬಂಧವಿದೆ. ಗುಳ್ಳೆಶಂಖು, ಪಿರಾಮಿಡಿಲಿಡೀ ಮತ್ತು ಟೀರಾಪಾಡ್‍ಗಳಲ್ಲಿ (ಕಡಲ ಚಿಟ್ಟೆ) ಚಿಪ್ಪು ಚೆನ್ನಾಗಿ ರೂಪುಗೊಂಡಿದೆಯಾದರೆ ಕಡಲ ಮೊಲದಲ್ಲಿ ಬಲು ಕ್ಷೀಣವಾಗಿ ಮ್ಯಾಂಟಲ್ ಒಳಗೆ ಹುದುಗಿದೆ. ನ್ಯೂಡಿಬ್ರ್ಯಾಂಕ್‍ಗಳಲ್ಲಿ ಸಂಪೂರ್ಣ ವಿನುಲಿಗೆಯನ್ನು ಕಾಣಬಹುದು (ಉದಾ: ಆಂಕಿಡಿಯಮ್). ಇವುಗಳಲ್ಲಿ ಚಿಪ್ಪು ಇಲ್ಲ. ಚಿಪ್ಪುಗಳ ಗಾತ್ರದಲ್ಲೂ ವ್ಯತ್ಯಾಸಗಳುಂಟು. ಪ್ಯೂಪ ಜಾತಿಯ ಭೂಚರ ಪಲ್ಮನೇಟಗಳಲ್ಲಿ ಅತಿ ಚಿಕ್ಕಗಾತ್ರದ ಚಿಪ್ಪು (ಸುಮಾರು 1 ಮಿಮೀ.) ಕಂಡುಬಂದರೆ ಮೆಗಲೊಟ್ರ್ಯಾಕ್ಟಸ್ ಎಂಬುದರಲ್ಲಿ ಬಲುದೊಡ್ಡ ಗಾತ್ರದ ಚಿಪ್ಪು (2 ಎತ್ತರದ) ಕಂಡುಬರುತ್ತದೆ.
ಗ್ಯಾಸ್ಟ್ರಾಪೊಡಗಳು ರಿಟ್ರ್ಯಾಕ್ಟರ್ ಮಾಂಸಖಂಡಗಳ ಸಹಾಯದಿಂದ ತಮ್ಮ ತಲೆ ಮತ್ತು ಪಾದಗಳನ್ನು ಚಿಪ್ಪಿನೊಳಕ್ಕೆ ಎಳೆದುಕೊಳ್ಳುತ್ತವೆ. ಕೆಲವು ಬಗೆಗಳಲ್ಲಿ ಚಿಪ್ಪಿನ ರಂಧ್ರವನ್ನು ಮುಚ್ಚಿಕೊಳ್ಳಲು ದಾರದ ಮೇಲೆ ಒಪರ್‍ಕ್ಯುಲಂ ಎನ್ನಲಾಗುವ ಒಂದು ಮುಚ್ಚಳವೂ ಇರುತ್ತದೆ.

ಪಾದ: ಆದಿಮಾಲಸ್ಕಗಳಲ್ಲಿರುವಂಥ, ಮತ್ತು ತೆವಳಲು ಅನುಕೂಲವಾಗಿರುವ ಚಪ್ಪಟೆಯಾದ ಪಾದ ಗ್ಯಾಸ್ಟ್ರಾಪೊಡಗಳಲ್ಲಿದೆ. ಇದು ವಿವಿಧ ವಸ್ತುಗಳ ಮೇಲೆ ಚಲಿಸಲು ಅನುಕೂಲಿಸುವಂತೆ ಮಾರ್ಪಾಟಾಗಿರುವುದನ್ನು ಕಾಣಬಹುದು. ಉದಾ: ಬಂಡೆಗಳ ಮೇಲೆ ಬರುವ ಲಿಂಪೆಟ್‍ಗಳಲ್ಲಿ ಕೈಟಾನಿನಲ್ಲಿರುವಂತೆ ಆಸರೆಗೆ ಅಂಟಿಕೊಳ್ಳಲು ಅನುಕೂಲವಾದ ಪಾದ ಇದೆ.
ಸಾಮಾನ್ಯವಾಗಿ ಪಾದದಲ್ಲಿ ಪ್ರೋಪೋಡಿಯಂ, ಮೀಸೋಪೋಡಿಯಂ ಮತ್ತು ಮೆಟಪೋಡಿಯಂ ಎಂಬ ಮೂರು ಭಾಗಗಳನ್ನು ಗುರುತಿಸಬಹುದು. ಅಲ್ಲದೆ ಪಾದದ ಮುಂಭಾಗದಲ್ಲಿ ಅಥವಾ ತಳಭಾಗದಲ್ಲಿ ಒಂದು ಲೋಳೆ ಗ್ರಂಥಿ ಇದೆ. ಇದರಿಂದ ಉತ್ಪತ್ತಿಯಾಗುವ ಲೋಳೆ ಪ್ರಾಣಿ ಚಲಿಸಿದ ಹಾದಿಯಲ್ಲಿ ಲೋಳೆಯಂಥ ಜಾಡನ್ನು ಬಿಡುತ್ತದೆ. ಪಾದದಲ್ಲಿ ಪುಷ್ಟವಾಗಿ ಬೆಳೆದ ಸ್ನಾಯುಗಳನ್ನೂ ಕಾಣಬಹುದು. ಇವುಗಳ ಅಲೆಯ ರೀತಿಯ ಚಲನೆಯಿಂದ ಪ್ರಾಣಿ ಚಲಿಸುತ್ತದೆ.
ಇನ್ನು ಕೆಲವು ಗ್ಯಾಸ್ಟ್ರಾಪೊಡಗಳಲ್ಲಿ ಬೇರೆ ಬಗೆಯ ಚಲನೆಯನ್ನು ಕಾಣಬಹುದು. ಉದಾಹರಣೆಗೆ ಜೌಗುಪ್ರದೇಶದಲ್ಲಿ ವಾಸಿಸುವ ಮೆಲಾಂಪಸ್ ಎಂಬುದು ಪಾದದ ಮುಂಭಾಗವನ್ನು ಮೊದಲು ಮುಂಚಾಚಿ ಅದರಿಂದ ನೆಲವನ್ನಾಗಲಿ ಇನ್ನಾವ ವಸ್ತುವನ್ನಾಗಲಿ ಹಿಡಿದುಕೊಂಡು ಆಮೇಲೆ ತನ್ನ ದೇಹವನ್ನು ಎಳೆದುಕೊಳ್ಳುತ್ತದೆ. ಲ್ಯಾಕುನ ಎಂಬ ಪ್ರಾಣಿಯ ಪಾದದ ತಳಭಾಗದ ಮಧ್ಯದಲ್ಲಿ ಉದ್ದಕ್ಕೆ ಒಂದು ಕಾಲುವೆಯಿದ್ದು ಅದು ಪಾದವನ್ನು ಎಡ ಮತ್ತು ಬಲಭಾಗಗಳಾಗಿ ವಿಭಾಗಿಸಿದೆ. ಹುಳು ಚಲಿಸುವಾಗ ಈ ಭಾಗಗಳು ಒಂದಾದ ಮೇಲೆ ಒಂದರಂತೆ ಚಲಿಸುತ್ತವೆ.

ನೀರಿನ ತಳಭಾಗದಲ್ಲಿರುವ ಮೃದುವಾದ ಮಣ್ಣಿನಲ್ಲಿನ ಬಿಲಗಳಲ್ಲಿ ವಾಸಿಸುವ ಪ್ರೋಸೋಬ್ರ್ಯಾಂಕ್‍ಗಳು ಮತ್ತೊಂದು ರೀತಿಯಲ್ಲಿ ತಮ್ಮ ಪಾದವನ್ನು ಮಾರ್ಪಾಟು ಮಾಡಿಕೊಂಡಿವೆ. ಇವುಗಳ ಪಾದದ ಪ್ರೋಪೋಡಿಯಂ ಗುದ್ದಲಿಯಾಕಾರದಲ್ಲಿದ್ದು ನೆಲವನ್ನು ಅಗೆಯಲು ಸಹಾಯಕವಾಗಿದೆ. ಪಾದದ ಮುಂತುದಿಯಲ್ಲಿರುವ ಒಂದು ಪದರ ಗುರಾಣಿಯಂತೆ ತಲೆಯನ್ನು ಮುಚ್ಚಿದ್ದು ಮಣ್ಣು ಆ ಕಡೆಗೆ ಹೋಗದಂತೆ ತಡೆಯುತ್ತದೆ. ಚಿಪ್ಪುಗಳುಳ್ಳ ಪ್ರಭೇದಗಳ ಪಾದದ ಹಿಂತುದಿಯ ಮೇಲ್ಛಾಗದಲ್ಲಿ ಪೆರಿಆಸ್ಟ್ರಕಂ ಅಥವಾ ಕ್ಯಾಲ್ಸಿಯಂ ಕಾರ್ಬೊನೇಟಿನಿಂದ ಕೂಡಿದ ಗಡುಸಾದ ತಟ್ಟೆಯಂಥ ರಚನೆ ಇದೆ. ಇದಕ್ಕೆ ಒಪರ್‍ಕ್ಯುಲಂ ಎಂದು ಹೆಸರು. ಪ್ರಾಣಿ ಪಾದವನ್ನು ಚಿಪ್ಪಿನೊಳಕ್ಕೆಳೆದುಕೊಂಡಾಗ ಇದು ಚಿಪ್ಪಿನ ರಂಧ್ರವನ್ನು ಅಚ್ಚುಕಟ್ಟಾಗಿ ಮುಚ್ಚುತ್ತದೆ. ಸ್ಟ್ರಾಂಬಸ್ ಎಂಬ ಪ್ರಾಣಿಯಲ್ಲಿ ಪಾದ ಚಿಕ್ಕದಾಗಿದ್ದು ಒಪರ್‍ಕ್ಯುಲಂ ನಖದಂತೆ ಇದೆ. ಇಂಥ ಒಪರ್‍ಕ್ಯುಲಂ ಪ್ರಾಣಿ ನೆಲದೊಳಗೆ ಹುದುಗಿಕೊಳ್ಳುವುದಕ್ಕೂ ನೆಲದಿಂದ ಹೊರಕ್ಕೆ ಬರುವುದಕ್ಕೂ ಸಹಾಯಕವಾಗಿದೆ.

ಪ್ರೋಸೋಬ್ರ್ಯಾಂಕಿಯ ಉಪವರ್ಗದ ಹೆಟರಾಪೊಡ ಮತ್ತು ಒಫಿಸ್ತೊಬ್ರ್ಯಾಂಕಿಯ ಗುಂಪಿನ ಕಡಲ ಚಿಟ್ಟೆಗಳ ಪಾದ ಈಜುವುದಕ್ಕೆ, ನೀರಿನಲ್ಲಿ ತೇಲುವುದಕ್ಕೆ ಸಹಾಯಕವಾಗುವಂತೆ ಈಜುರೆಕ್ಕೆಯಾಗಿ ಮಾರ್ಪಟ್ಟಿದೆ. ಇನ್ನು ಕೆಲವು ಒಫಿಸ್ತೊಬ್ಯಾಂಕ್‍ಗಳ ಪಾದ ಬೇರೆ ರೀತಿಯಲ್ಲಿ ಮಾರ್ಪಾಟಾಗಿದೆ. ಇವುಗಳಲ್ಲಿ ಪಾದದ ಎರಡು ಬದಿಯಿಂದ ಹುಟ್ಟಿ, ದೇಹದ ಎರಡು ಕಡೆಗಳಲ್ಲೂ ವಿಶಾಲವಾಗಿ ಹರಡಿರುವ ಎರಡು ರೆಕ್ಕೆಗಳಿವೆ. ಇವಕ್ಕೆ ಪ್ಯಾರಪೋಡಿಯ ಎಂದು ಹೆಸರು. ಇವು ಅಗಲವಾಗಿದ್ದು ಈಜಲು ಬಹಳ ಸಹಾಯಕವಾಗಿವೆ. ಕಡಲ ಚಿಟ್ಟೆಗಳಲ್ಲಿ ಪ್ಯಾರಪೋಡಿಯಗಳು ಉದ್ದವಾಗಿದ್ದು ಪಾದದ ಮುಂದಿನ ತುದಿಯಲ್ಲಿರುತ್ತದೆ.
ಕೆಲವು ಗ್ಯಾಸ್ಟ್ರಾಪೊಡಗಳಲ್ಲಿ ಚಲನೆಯೇ ಇಲ್ಲ. ಇವು ಯಾವುದಾದರೊಂದು ಪದಾರ್ಥಕ್ಕೆ ಅಂಟಿಕೊಂಡು ಬದುಕುತ್ತವೆ. ಉದಾ: ಸತ್ತ ಅಥವಾ ಬದುಕಿರುವ ಇತರ ಮಾಲಸ್ಕಗಳ ಚಿಪ್ಪಿಗೆ ಅಂಟಿಕೊಂಡಿರುವ ಕ್ರೆಪಿಡ್ಯುಲ. ಇದರಲ್ಲೂ ಪಾದ ಪೂರ್ಣವಾಗಿ ಇಲ್ಲವೆಂದು ಹೇಳಲಾಗದು. ಇದು ಇತರ ಪದಾರ್ಥಗಳಿಗೆ ಅಂಟಿಕೊಳ್ಳಲು ಸಹಾಯಕವಾದ ಅಂಟುಸಿಂಬಿಯಾಗಿ ಮಾರ್ಪಟ್ಟಿದೆ.
ಜಲಚಲನೆ ಮತ್ತು ಉಸಿರಾಟ : ಗ್ಯಾಸ್ಟ್ರಾಪೊಡಗಳ ದೇಹದ ಮ್ಯಾಂಟಲ್ ಕುಹರದೊಳಗೆ ಪ್ರವಹಿಸುವ ನೀರಿನ ಚಲನೆ ಉಸಿರಾಟಕ್ಕೆ ಹಾಗೂ ದೇಹದಲ್ಲಿ ಉತ್ಪತ್ತಿಯಾಗುವ ತ್ಯಾಜ್ಯವಸ್ತುಗಳನ್ನು ಹೊರಹಾಕುವುದಕ್ಕೆ ಸಹಾಯ ಮಾಡುತ್ತದೆ. ಮ್ಯಾಂಟಲ್ ಕುಹರದಲ್ಲಿ ಉಸಿರಾಟಕ್ಕೆ ಸಹಾಯಕವಾದ ಟಿನೀಡಿಯ ಅಥವಾ ಕಿವಿರುಗಳು ಇವೆ.
ಅತ್ಯಂತ ಕೆಳಮಟ್ಟದ ಕಿವಿರು ರಚನೆ ಹಾಗೂ ಜಲಚಲನೆಯನ್ನು ಕೆಲವು ಬಗೆಯ ಪ್ರೋಸೋಬ್ರ್ಯಾಂಕ್‍ಗಳಲ್ಲಿ ಕಾಣಬಹುದು. ಉದಾಹರಣೆ : ಆರ್ಕಿಗ್ಯಾಸ್ಟ್ರಾಪೊಡ ಉಪಗಣದ ಹ್ಯಾಲಿಯೋಟಿಸ್, ಸಿಸುರೆಲ ಮತ್ತು ಕೆಲವು ಬಗೆಯ ಲಿಂಪೆಟ್‍ಗಳು. ಇವುಗಳ ಮ್ಯಾಂಟಲ್ ಕುಹರದಲ್ಲಿ ಪ್ರತ್ಯೇಕವಾದ ಸೀಳುಗಾಲುವೆ ಇರುತ್ತದೆ ಅಥವಾ ಚಿಪ್ಪಿನಲ್ಲಿ ರಂಧ್ರಗಳಿರುತ್ತವೆ. ಜೊತೆಗೆ ಇವುಗಳಲ್ಲಿ ಆದಿಮಾಲಸ್ಕ ಗುಂಪಿನ ಕಿವಿರುಗಳನ್ನು ಹೋಲುವ ನಿಮ್ನದರ್ಜೆಯ ಎರಡು ಕಿವಿರುಗಳಿವೆ. ಮಲಾಶಯ ಮತ್ತು ಗುದದ್ವಾರಗಳು ಮ್ಯಾಂಟಲ್ ಕುಹರದ ಅಂಚಿನಿಂದ ಬೇರ್ಪಟ್ಟು ಸೀಳುಗಾಲುವೆಯೊಳಗೆ ಅಥವಾ ಚಿಪ್ಪಿನ ರಂಧ್ರದ ಒಳಗೆ ತೆರೆಯುತ್ತವೆ.
ಅಸಮಸ್ಥಿತಿಯ ದೇಹವನ್ನುಳ್ಳ ಹ್ಯಾಲಿಯೋಟಿಸ್ ಟ್ಯೂಬರ್‍ಕ್ಯುಲೇಟ ಎಂಬ ಪ್ರಾಣಿಯ ಮ್ಯಾಂಟಲ್ ಕುಹರದಲ್ಲಿ ಜೋಡಿತವಾಗಿರುವ ಕಿವಿರುಗಳು ಅದನ್ನು ತಳಭಾಗ ಹಾಗೂ ಮೇಲ್ಭಾಗಗಳಾಗಿ ವಿಭಾಗಿಸುತ್ತವೆ. ನೀರು ಹೊರಗಿನಿಂದ ಕಿವಿರುಗಳ ತಳಭಾಗಕ್ಕೆ ನುಗ್ಗಿ ಕಿವಿರುಗಳ ಮೇಲೆ ಹರಿಯುತ್ತದೆ. ಆಗ ಆಕ್ಸಿಜನ್ ಮತ್ತು ಕಾರ್ಬನ್ ಡೈ ಆಕ್ಸೈಡ್‍ಗಳ ವಿನಿಮಯವಾಗುತ್ತದೆ. ಅನಂತರ ನೀರು ಕಿವಿರುಗಳ ಮೇಲ್ಭಾಗಕ್ಕೆ ಬಂದು ಚಿಪ್ಪಿನ ರಂಧ್ರಗಳ ಮೂಲಕ ಹೊರಬರುತ್ತದೆ. ಹಾಗೆ ಹೊರ ಬರುವಾಗ ಶುದ್ಧೀಕರಣಾಂಗಗಳು ಮತ್ತು ಜೀರ್ಣಾಂಗಗಳು ವಿಸರ್ಜಿಸುವ ತ್ಯಾಜ್ಯವಸ್ತುಗಳನ್ನು ನೀರು ತನ್ನೊಂದಿಗೆ ಹೊರಸಾಗಿಸುತ್ತದೆ.

ಸಿಸುರೆಲದಲ್ಲಿಯೂ ಹ್ಯಾಲಿಯೋಟಿಸ್‍ನಲ್ಲಿರುವಂತೆಯೇ ಸುರುಳಿ ಸುತ್ತಿದ ಚಿಪ್ಪಿದ್ದು ಜಲಚಲನೆ ಅದರಂತೆಯೇ ನಡೆಯುತ್ತದೆ. ಆದರೆ ಸಿಸುರೆಲದ ಚಿಪ್ಪಿನಲ್ಲಿ ರಂಧ್ರಗಳಿಲ್ಲ. ಚಿಪ್ಪಿನ ಮುಂತುದಿಯ ಭಾಗದಲ್ಲಿ ಆಳವಾದ ಕಾಲುವೆಯಂಥ ರಚನೆಯಿದೆ. ದೇಹವನ್ನು ಪ್ರವೇಶಿಸುವ ನೀರು ಕಿವಿರುಗಳ ಮೇಲೆ ಹರಿದು ಮ್ಯಾಂಟಲ್ ಕುಹರದ ಮೇಲ್ಭಾಗವನ್ನು ತಲಪಿ ಅಲ್ಲಿಂದ ಈ ಕಾಲುವೆಯ ಮೂಲಕ ಹೊರಬರುತ್ತದೆ. ಹೀಗೆ ಹೊರಬರುವಾಗ ಗುದದ್ವಾರ ಮತ್ತು ನೆಫ್ರೀಡಿಯಗಳಿಂದ ತ್ಯಾಜ್ಯವಸ್ತುಗಳನ್ನು ಹೊರತರುತ್ತದೆ.
ಕೀಹೋಲ್ ಲಿಂಪೆಟ್‍ಗಳಲ್ಲಿ ದ್ವಿತೀಯಕ ಸಮಮಿತಿಯನ್ನು ಪಡೆದಿರುವ ತ್ರಿಕೋನಾಕಾರದ ಚಿಪ್ಪಿದೆ. ಚಿಪ್ಪಿನ ಮುಂತುದಿಯಲ್ಲಿ ಕಾಲುವೆಯಂಥ ರಚನೆ ಇರಬಹುದು ಅಥವಾ ರಂಧ್ರವಿರಬಹುದು. ಚಿಪ್ಪಿನ ತುದಿಯಲ್ಲಿ ರಂಧ್ರವಿರುವ ಸ್ಥಿತಿಯನ್ನು ಡಯೊಡೋರದಲ್ಲಿ ಕಾಣಬಹುದು. ದೇಹದ ಮುಂಭಾಗದಿಂದ ಒಳಪ್ರವೇಶಿಸಿದ ನೀರು, ಕಿವಿರುಗಳ ಮೇಲೆ ಪ್ರವಹಿಸಿ ಚಿಪ್ಪಿನ ತುದಿಯ ಕಡೆಗೆ ಬಿರುಸಿನಿಂದ ಸಾಗಿ ರಂಧ್ರದ ಮೂಲಕ ಚಿಲುಮೆಯಂತೆ ಹೊರಬರುತ್ತದೆ. ರಂಧ್ರದ ತಳಭಾಗದ ಅಂಚಿನಲ್ಲಿ ಶುದ್ಧೀಕರಣಾಂಗರಂಧ್ರ ಹಾಗೂ ಗುದದ್ವಾರಗಳು ತೆರೆದುಕೊಳ್ಳುವುದರಿಂದ ಹೊರಬರುವ ನೀರು ತ್ಯಾಜ್ಯವಸ್ತುಗಳನ್ನು ಹೊರತರುತ್ತದೆ. ನಿಜವಾದ ಕಡಲು ಲಿಂಪೆಟ್‍ಗಳಾದ ಪಟಲ್ಲೇಸಿಯಗಳು ಕೂಡ ಆರ್ಕಿಗ್ಯಾಸ್ಟ್ರಾಪೊಡಗಳ ಒಂದು ಗುಂಪು. ಕೀಹೋಲ್ ಲಿಂಪೆಟ್‍ಗಳನ್ನೇ ಹೋಲುವ ಇವುಗಳ ಚಿಪ್ಪಿನಲ್ಲೂ ದ್ವಿತೀಯಕ ಸಮಪಾಶ್ರ್ವ ಸ್ಥಿತಿ ಇದೆ. ಚಿಪ್ಪು ತ್ರಿಕೋನಾಕಾರಕ್ಕಿದೆ. ಆದರೆ ಇವುಗಳಲ್ಲಿ ಮ್ಯಾಂಟಲ್ ಕುಹರದ ಕಾಲುವೆಯಾಗಲೀ ಚಿಪ್ಪಿನಲ್ಲಿ ರಂಧ್ರವಾಗಲೀ ಇಲ್ಲ. ಕೆಲವು ಬಗೆಗಳಲ್ಲಿ ಕಿವಿರುಗಳು ಕ್ಷೀಣಿಸಿರುವುದನ್ನು ಮತ್ತೆ ಕೆಲವು ಬಗೆಗಳಲ್ಲಿ ನಶಿಸಿಹೋಗಿರುವುದನ್ನು ಕಾಣಬಹುದು. ಏಕ್ಮೀಯ ಎಂಬುದರಲ್ಲಿ ಒಂದೇ ಒಂದು ಕಿವಿರಿದೆ; ಮ್ಯಾಂಟಲ್ ಪದರ ಪುಷ್ಟವಾಗಿ ಬೆಳೆದಿದ್ದು ಶರೀರದಿಂದ ಹೊರಬರುತ್ತದೆ ಪಾದದ ಸುತ್ತ ಇಳಿಬಿದ್ದಿರುವ ಈ ಮ್ಯಾಂಟಲ್‍ನಲ್ಲಿ ಪಾದಕ್ಕೆ ಅಭಿಮುಖವಾಗಿರುವ ಒಂದು ಕಾಲುವೆಯಿದೆ. ದೇಹದೊಳಕ್ಕೆ ಬರುವ ನೀರು ದೇಹದ ಎಡಭಾಗದ ಕಾಲುವೆಯ ಮೂಲಕ ಹರಿದು ಕಿವಿರಿನ ಮೇಲೆ ಪ್ರವಹಿಸಿ ಬಲಭಾಗದ ಕಾಲುವೆಯ ಮೂಲಕ ಪಾದದ ಹಿಂಬದಿಯಲ್ಲಿ ಹೊರಹೋಗುತ್ತದೆ.

ಪಟೆಲದಲ್ಲಿ ನಿಜಕಿವಿರುಗಳು ಮಾಯವಾಗಿ ಇವಕ್ಕೆ ಬದಲಾಗಿ ದ್ವಿತೀಯಕ ಕಿವಿರುಗಳು ಹುಟ್ಟಿಕೊಂಡಿವೆ. ಕಿವಿರುಗಳು ಮ್ಯಾಂಟಲಿನ ಕಾಲುವೆಯೊಳಕ್ಕೆ ದೇಹದ ಎರಡೂ ಕಡೆಗಳಿಂದಲೂ ಜೋತುಬಿದ್ದಿವೆ. ದೇಹದೊಳಕ್ಕೆ ಬರುವ ನೀರಿನ ಪ್ರವಾಹ ಈ ಕಾಲುವೆಗಳ ಮೂಲಕ ಮುಂತುದಿಯಿಂದ ಹರಿದುಬಂದು ಹಿಂತುದಿಯಿಂದ ಹೊರಬರುತ್ತದೆ.

ಉಳಿದ ಪ್ರೋಸೋಬ್ರ್ಯಾಂಕ್‍ಗಳಲ್ಲಿ ಜಲಚಲನೆ ಮತ್ತು ಕಿವಿರುಗಳ ರಚನೆಯಲ್ಲಿ ಕೆಲವು ಮೂಲಭೂತ ಬದಲಾವಣೆಗಳನ್ನು ಕಾಣಬಹುದು. ಇವುಗಳಲ್ಲಿ ಬಲಭಾಗದ ಕಿವಿರು ಸಂಪೂರ್ಣವಾಗಿ ಮಾಯವಾಗಿದೆ. ಸಿಹಿನೀರಿನಲ್ಲಿ ವಾಸಿಸುವ ವ್ಯಾಲ್ವೇಟ ಒಂದನ್ನು ಬಿಟ್ಟರೆ ಉಳಿದವುಗಳಲ್ಲಿ ಎಡಭಾಗದ ಕಿವಿರು ತನ್ನ ಆದಿಗುಣವಾದ ಬೈಪೆಕ್ಟಿನೇಟ್ ಸ್ಥಿತಿಯನ್ನು ಕಳೆದುಕೊಂಡಿದೆ. ಕಿವಿರಿನ ಅಕ್ಷದ ಒಂದು ಕಡೆ ಮಾತ್ರ ಫಿಲಮೆಂಟ್‍ಗಳು ಇವೆ. ಅಲ್ಲದೆ ಕಿವಿರು ದೇಹದ ಒಳಭಾಗಕ್ಕೆ ಅಂಟಿಕೊಂಡು ತೂಗಾಡುತ್ತದೆ. ನೀರು ತಲೆಯ ಎಡಬದಿಯಿಂದ ಒಳನುಗ್ಗಿ ಮ್ಯಾಂಟಲ್ ಕುಹರದಲ್ಲಿ ಪ್ರವಹಿಸಿ ಬಲತುದಿಯಿಂದ ಹೊರಬರುತ್ತದೆ. ಮಲಾಶಯ ಉದ್ದವಾಗಿದ್ದು ಗುದದ್ವಾರ ದೇಹದ ಬಲಭಾಗದ ಮ್ಯಾಂಟಲ್ ಪದರದ ತುದಿಯಲ್ಲಿ ತೆರೆದುಕೊಳ್ಳುವುದರಿಂದ ಒಳಬರುವ ನೀರು ತ್ಯಾಜ್ಯವಸ್ತುಗಳಿಂದ ಮಲಿನಗೊಳ್ಳದು. ನುಲಿಗೆ ಕ್ರಿಯೆಯಿಂದ ಉದ್ಭವಿಸಿದ ಶರೀರ ನೈರ್ಮಲ್ಯ ಸಮಸ್ಯೆಗಳನ್ನು ಈ ಜೀವಿಗಳು ಹೀಗೆ ಪರಿಹರಿಸಿಕೊಂಡಿವೆ.

ಉಸಿರಾಟಕ್ಕೆ ಬೇಕಾದ ನೀರಿನ ಪ್ರವಾಹದ ದಕ್ಷತೆಯನ್ನು ಹೆಚ್ಚಿಸಿಕೊಳ್ಳಲು ಬಹುಪಾಲು ಪ್ರಭೇದಗಳಲ್ಲಿ ನೀರು ಒಳ ಪ್ರವಹಿಸುವ ಭಾಗದ ಮ್ಯಾಂಟಲ್ ಪದರದ ಅಂಚು ಒಂದುಗೂಡಿ ಒಂದು ರೀತಿಯ ಸೈಫನ್ ಕೊಳವೆಯಂತಾಗಿದೆ. ಉದಾ : ಬಕ್‍ಸಿನಮ, ಕೋಲಸ್, ಬ್ಯೂಸಿಕಾನ್ ಮತ್ತು ಪ್ಯಾಸಿಯೊಲರಿಯ. ಜೊತೆಗೆ ಈ ಸೈಫನ್ ಕೊಳವೆಯನ್ನಿಟ್ಟುಕೊಳ್ಳಲು ಚಿಪ್ಪಿನ ಮುಂತುದಿಯ ರಂಧ್ರದ ಭಾಗದಲ್ಲಿ ಉದ್ದವಾದ ಕಾಲುವೆಯಂಥ ರಚನೆಯೊಂದಿದೆ.

ಉಪವರ್ಗಗಳಾದ ಒಫಿಸ್ತೊಬ್ರ್ಯಾಂಕಿಯ ಮತ್ತು ಪಲ್ಮನೇಟಗಳು ಕೇವಲ ಎಡಕಿವಿರನ್ನು ಉಳಿಸಿಕೊಂಡಿದ್ದ ಪ್ರೋಸೊಬ್ರ್ಯಾಂಕ್‍ಗಳಿಂದ ಹುಟ್ಟಿಬಂದಿರಬೇಕೆಂದು ಊಹಿಸಲಾಗಿದೆ.

ಒಫಿಸ್ತೊಬ್ರ್ಯಾಂಕ್‍ಗಳಲ್ಲಿ ವಿನುಲಿಗೆಯ ಜೊತೆಗೆ ಮೂಲ ಕಿವಿರು ಮಾಯವಾಗಿ ದ್ವಿತೀಯಕ ಕಿವಿರುಗಳು ಹುಟ್ಟಿಕೊಂಡಿವೆ. ಗುಳ್ಳೆ ಚಿಪ್ಪುಗಳು ಮತ್ತು ಕಡಲ ಮೊಲಗಳು ಆದಿಯಲ್ಲಿದ್ದ ಒಂದೇ ಕಿವಿರನ್ನು ಉಳಿಸಿಕೊಂಡಿವೆ. ಅಪೂರ್ಣ ಮಿನುಲಿಗೆಯಿಂದಾಗಿ ಈ ಕಿವಿರು ದೇಹದ ಬಲಭಾಗದಲ್ಲಿದೆ. ಸಂಪೂರ್ಣವಾಗಿ ವಿನುಲಿಗೆಗೆ ಒಳಗಾಗಿರುವ ನ್ಯೂಡಿಬ್ರ್ಯಾಂಕ್‍ಗಳಲ್ಲಿ (ಕಡಲಗೊಂಡೆ ಹುಳುಗಳು) ಮ್ಯಾಂಟಲ್ ಕುಹರ ಹಾಗೂ ಕಿವಿರುಗಳು ಅದೃಶ್ಯವಾಗಿವೆ. ಆದ್ದರಿಂದ ಇವುಗಳಲ್ಲಿ ದೇಹದ ಮೇಲ್ಮೈನಿಂದ ಅಥವಾ ದ್ವಿತೀಯಕ ಕಿವಿರುಗಳಿಂದ ಉಸಿರಾಟ ನಡೆಯುತ್ತದೆ. ಬಹುಪಾಲು ನ್ಯೂಡಿಬ್ರ್ಯಾಂಕ್‍ಗಳಲ್ಲಿ ದೇಹದ ಬೆನ್ನುಭಾಗ ಅತಿ ಅಗಲವಾಗಿದ್ದು ಅದರ ಮೇಲೆ ಸೆರೇಟಗಳೆಂಬ ರಚನೆಗಳು ಬೆಳೆದುಕೊಂಡಿವೆ. ಇವು ಸಾಮಾನ್ಯವಾಗಿ ಅನೇಕ ಸಾಲುಗಳಲ್ಲಿ ಜೋಡಣೆಗೊಂಡಿವೆ. ಸೆರೇಟಗಳು ಇಯೋಲಿಡಿಯದಲ್ಲಿ ಗದೆಯಾಕಾರದವಾಗಿದ್ದರೆ ಡೆಂಡ್ರೋನೋಟಸಿನಲ್ಲಿ ಕವಲೊಡೆದಿವೆ. ಡೋರಿಸ್ ಮುಂತಾದ ನ್ಯೂಡಿಬ್ರ್ಯಾಂಕ್‍ಗಳಲ್ಲಿ ಸೆರೇಟಗಳೇ ಇಲ್ಲ. ಆದರೆ ಇವುಗಳಲ್ಲಿ ಗುದದ್ವಾರದ ಸುತ್ತ ಜೋಡಣೆಗೊಂಡಿರುವ ದ್ವಿತೀಯಕ ಕಿವಿರುಗಳಿವೆ. ನ್ಯೂಡಿಬ್ರ್ಯಾಂಕ್‍ಗಳ ಸೆರೇಟ ಮತ್ತು ದೇಹದ ಇತರ ಭಾಗಗಳು ಸಾಮಾನ್ಯವಾಗಿ ಕೆಂಪು, ಹಳದಿ, ಕಿತ್ತಳೆ, ನೀಲಿ, ಹಸಿರು ಮುಂತಾದ ವಿವಿಧ ರೀತಿಯ ಉಜ್ವಲ ಬಣ್ಣಗಳಿಂದ ಕೂಡಿದ್ದು ಈ ಪ್ರಾಣಿಗಳನ್ನು ಮಾಲಸ್ಕ ಗುಂಪಿನ ಅತ್ಯಂತ ಸುಂದರ ಪ್ರಾಣಿಗಳನ್ನಾಗಿ ಮಾಡಿವೆ.

ಆತ್ರ್ರಾಪೊಡ ಗುಂಪನ್ನು ಬಿಟ್ಟರೆ ಭೂವಾಸಕ್ಕೆ ಹೊಂದಿಕೊಂಡಿರುವ ಅಕಶೇರುಕಗಳೆಂದರೆ ಪಲ್ಮನೇಟ ಗುಂಪು. ಹೊಸತೆರನ ಪರಿಸರದಿಂದಾಗಿ ಇವುಗಳ ಉಸಿರಾಟದ ಸಂಯಂತ್ರದಲ್ಲಿ ಮೂಲಭೂತ ಬದಲಾವಣೆಗಳಾಗಿವೆ. ಕಿವಿರುಗಳು ಮಾಯವಾಗಿರುವುದು, ಮ್ಯಾಂಟಲ್ ಕುಹರ ಅತಿ ಹೆಚ್ಚಿನ ರಕ್ತ ಪರಿಚಲನೆ ಪಡೆದಿದ್ದು ಪುಪ್ಫುಸವಾಗಿರುವುದು, ಮ್ಯಾಂಟಲ್ ಪದರದ ಅಂಚು ಭದ್ರವಾಗಿ ಪಾದದ ಸುತ್ತಲೂ ಅಂಟಿಕೊಂಡು ಚೀಲದಂತಾಗಿರುವುದು, ಇವಕ್ಕೆ ಬಲಭಾಗದಲ್ಲಿ ಮಾತ್ರ ನ್ಯೂಮೋಸ್ಟೋಮ್ ಎಂಬ ಒಂದು ಸಣ್ಣ ರಂಧ್ರವಿರುವುದು ಮತ್ತು ಮ್ಯಾಂಟಲ್ ಕುಹರದ ತಳಭಾಗದಲ್ಲಿ ಮಾಂಸಖಂಡಗಳು ಪುಷ್ಟವಾಗಿ ಬೆಳೆದಿದ್ದು ಅದು ವಪೆಯಂತೆ ಕೆಲಸ ಮಾಡುವುದು-ಇವು ಈ ಬದಲಾವಣೆಗಳಲ್ಲಿ ಮುಖ್ಯವಾದವು. ನ್ಯೂಮೋಸ್ಟೋಮ್ ರಂಧ್ರ ತೆರೆದುಕೊಳ್ಳಲು ಹಾಗೂ ಮುಚ್ಚಿಕೊಳ್ಳಲು ಅದರ ಹಿಗ್ಗುವಿಕೆ ಮತ್ತು ಕುಗ್ಗುವಿಕೆಗಳೇ ಕಾರಣ. ಹಿಗ್ಗುವಿಕೆ ಮತ್ತು ಕುಗ್ಗುವಿಕೆಗಳಿಂದ ರಕ್ತ ಆಕ್ಸಿಜನ್ನನ್ನು ಹೀರಿಕೊಳ್ಳಲು ಅನುಕೂಲವಾಗುತ್ತದೆ. ಜನೆಲ್ಲ ಮುಂತಾದ ಕೆಲವು ಭೂಚರ ಶಂಭುಕಗಳ ಮ್ಯಾಂಟಲ್ ಪದರದಿಂದ ಬೆರಳುಗಳಂಥ ರಚನೆಗಳು ಮ್ಯಾಂಟಲ್ ಕುಹರದೊಳಕ್ಕೆ ಚಾಚಿಕೊಂಡಿವೆ. ಇವಕ್ಕೆ ಟ್ರೇಕಿಯಗಳೆಂದು ಹೆಸರು. ಇವುಗಳಿಂದಾಗಿ ಮ್ಯಾಂಟಲ್ ಕುಹರದ ಹರವು ಹೆಚ್ಚಿದೆ.

ಗ್ಯಾಸ್ಟ್ರಾಪೊಡ ಗುಂಪಿನಲ್ಲಿ ಕೇವಲ ಪಲ್ಮನೇಟುಗಳು ಮಾತ್ರ ಭೂವಾಸಿಗಳಾಗಿಲ್ಲ. ಪ್ರೋಸೋಬ್ರ್ಯಾಂಕಿಯ ಉಪವರ್ಗದ ಹೆಲಿಸಿನಿಡೀ, ಸೈಕ್ಲೊಫ್ಲೋರಿಡೀ ಮತ್ತು ಪೊಮ್ಯಾಟಿಯಾಸಿಡೀ ಕುಟುಂಬಕ್ಕೆ ಸೇರಿದ ಸುಮಾರು 4,000 ಪ್ರಭೇದಗಳೂ ಭೂವಾಸಿಗಳೇ.

ಸಿಹಿನೀರಿನಲ್ಲಿ ವಾಸಿಸುವ ಬಸವನ ಹುಳುಗಳು ಭೂವಾಸಿ ಬಸವನ ಹುಳುಗಳಿಂದ ಉದ್ಭವವಾಗಿವೆ. ಭೂಜೀವನದಿಂದ ಜಲಜೀವನಕ್ಕೆ ಮರಳಿ ಬಂದಿರುವ ಇವುಗಳಲ್ಲಿ ಉಸಿರಾಟ ವ್ಯವಸ್ಥೆಯ ಅಂಗಗಳು ವಿವಿಧ ಬಗೆಗಳಲ್ಲಿ ವಿಕಾಸವಾಗಿವೆ. ಲಿಮ್‍ನೀಯಿಡೀ ಮತ್ತು ಫೈಸಿಡೀ ಕುಟುಂಬಗಳ ಪ್ರಾಣಿಗಳು ನೀರಿನಲ್ಲಿ ಜೀವಿಸಿದರೂ ನೇರವಾಗಿ ಗಾಳಿಯನ್ನೇ ಉಸಿರಾಡುತ್ತವೆ. ಗಾಳಿ ಸೇವಿಸಲು ಇವು ಆಗಾಗ ನೀರಿನ ಮೇಲ್ಮೈಗೆ ಬರುತ್ತವೆ. ಇವುಗಳ ನ್ಯೂಮೋಸ್ಟೋಮ್ ಸುತ್ತ ಇರುವ ಮ್ಯಾಂಟಲ್ ಪದರ ಒಂದು ರೀತಿಯ ಕೊಳವೆಯಂತಾಗಿ ನೀರಿನಿಂದ ಹೊರಚಾಚಿ ಗಾಳಿಯನ್ನು ಎಳೆದುಕೊಳ್ಳುತ್ತದೆ. ಈ ಎರಡು ಕುಟುಂಬಗಳ ಇನ್ನು ಕೆಲವು ಪ್ರಭೇದಗಳು ನೀರಿನಿಂದ ಮೇಲೆ ಬರುವುದೇ ಇಲ್ಲ. ಇವು ತಮಗೆ ಅಗತ್ಯವಾದ ಆಕ್ಸಿಜನ್‍ನ್ನು ನೀರಿನಿಂದಲೇ ಪಡೆಯುತ್ತವೆ.

ಪಲ್ಮನೇಟ ಉಪವರ್ಗದ ಪ್ಲೇನಾರ್‍ಬಿಡೀ ಮತ್ತು ಆಂಕೈಲಿಡೀ ಕುಟುಂಬಗಳ ಪ್ರಭೇದಗಳು ಪೂರ್ಣವಾಗಿ ಜಲವಾಸಕ್ಕೇ ಹೊಂದಿಕೊಂಡಿವೆ. ಇವುಗಳಲ್ಲಿ ಮ್ಯಾಂಟಲ್ ಕುಹರ ಕ್ಷೀಣಿಸಿಹೋಗಿದೆ. ಪಾದದ ಎಡಭಾಗದಲ್ಲಿ ಚೂಪಾದ, ತ್ರಿಕೋನಾಕಾರದ ದ್ವಿತೀಯಕ ಕಿವಿರು ರೂಪುಗೊಂಡಿದೆ. ಇದಕ್ಕೆ ಮಿಥ್ಯಾಪುಪ್ಫುಸ ಎಂದು ಹೆಸರು.
ಶುದ್ಧೀಕರಣ ಮತ್ತು ಜಲನಿಯಂತ್ರಣ : ಆರ್ಕಿಗ್ಯಾಸ್ಟ್ರಾಪೊಡದಲ್ಲಿ ಎರಡು ನೆಫ್ರೀಡಿಯಗಳು ಇವೆ. ಉಳಿದವುಗಳಲ್ಲಿ ಜನನೇಂದ್ರಿಯ ನಾಳದ ರಚನೆಯಲ್ಲಿ ಪಾಲುಗೊಳ್ಳುವ ಕೊಂಚ ಭಾಗವನ್ನು ಬಿಟ್ಟು ಬಲಗಡೆಯ ನೆಫ್ರೀಡಿಯಮ್ ಮಾಯವಾಗಿದೆ. ಎಡಗಡೆ ಇರುವ ನೆಫ್ರೀಡಿಯಮ್ ನುಲಿಗೆ ಕ್ರಿಯೆಯಿಂದಾಗಿ ಅಂಗಸ ರಾಶಿಯ ಮುಂಭಾಗದಲ್ಲಿ ಸ್ಥಿತವಾಗಿದೆ. ನೆಫ್ರೀಡಿಯಮ್ ತನ್ನ ರಚನೆಯಲ್ಲಿ ಮಾಲಸ್ಕ ವಿಭಾಗದ ಇತರ ಪ್ರಾಣಿಗಳಲ್ಲಿದ್ದಂತೆಯೇ ಇದೆ. U-ಆಕಾರದಲ್ಲಿರುವ ಇದರ ಗೋಡೆಗಳ ಮೇಲೆ ಮಡಿಕೆಗಳಂಥ ರಚನೆಗಳಿವೆ. ಇದರಿಂದಾಗಿ ನೆಫ್ರೀಡಿಯಮಿನ ಸ್ರಾವಕ ಪ್ರದೇಶ ಹೆಚ್ಚಾಗಿದೆ. ತ್ಯಾಜ್ಯ ವಸ್ತುಗಳು ಯೂರೆಟರ್ ಎಂಬ ಮೋಟು ನಾಳದ ಮೂಲಕ ಹೊರಬೀಳುತ್ತವೆ. ಪ್ರೋಸೋಬ್ರ್ಯಾಂಕ್ ಮತ್ತು ಒಫಿಸ್ತೊಬ್ರ್ಯಾಂಕ್‍ಗಳಲ್ಲಿ ನೆಫ್ರೀಡಿಯಮ್ ರಂಧ್ರ ಮ್ಯಾಂಟಲ್ ಕುಹರದ ಹಿಂಭಾಗದಲ್ಲಿ ತೆರೆದುಕೊಳ್ಳುತ್ತದೆ. ಈ ರಂಧ್ರದಿಂದ ಹೊರಬರುವ ತ್ಯಾಜ್ಯ ವಸ್ತುಗಳು ನೀರಿನ ಪರಿಚಲನೆಯ ಪ್ರವಾಹದ ಮೂಲಕ ಹೊರಹೋಗುತ್ತವೆ. ಈ ರೀತಿಯ ವ್ಯವಸ್ಥೆ ಪಲ್ಮನೇಟುಗಳಲ್ಲಿ ಸಾಧ್ಯವಿಲ್ಲ. ಏಕೆಂದರೆ ಇಲ್ಲಿ ಮ್ಯಾಂಟಲ್ ಕುಹರ ಪುಪ್ಫುಸವಾಗಿ ಕೆಲಸ ಮಾಡುತ್ತದೆ. ಆದ್ದರಿಂದ ಇವುಗಳಲ್ಲಿ ಯೂರೆಟರ್ ಉದ್ದವಾಗಿದೆ. ಇದು ಬಲಮ್ಯಾಂಟಲ್ ಗೋಡೆಯ ಮೇಲೆ ಹಾದು ಗುದದ್ವಾರದ ಬಳಿ ಹೊರತೆರೆದುಕೊಳ್ಳುತ್ತದೆ.

ಜಲವಾಸಿ ಗ್ಯಾಸ್ಟ್ರಾಪೊಡಗಳಲ್ಲಿ ತ್ಯಾಜ್ಯವಸ್ತುಗಳು ಅಮೋನಿಯ ಮತ್ತು ಅಮೋನಿಯಮ್ ಸಂಯುಕ್ತಗಳ ರೂಪದಲ್ಲಿರುತ್ತವೆ. ಭೂಚರ ಪಲ್ಮನೇಟಗಳು ತ್ಯಾಜ್ಯ ವಸ್ತುಗಳನ್ನು ಅಮೋನಿಯದ ರೂಪದಲ್ಲಿ ಹೊರಹಾಕದೆ ಯೂರಿಕ್ ಆಮ್ಲದ ಹರಳುಗಳ ರೂಪದಲ್ಲಿ ತ್ಯಜಿಸುತ್ತವೆ. ಇದರಿಂದ ದೇಹದಲ್ಲಿನ ನೀರು ಹೊರಬಾರದು.

ಭೂವಾಸಿ ಪಲ್ಮನೇಟಗಳು ತಮ್ಮ ದೇಹದ ಜಲವನ್ನು ಕಾಯ್ದಿಟ್ಟುಕೊಳ್ಳುವ ಸಲುವಾಗಿ ಯಾವಾಗಲೂ ಜೌಗು ಭೂಮಿಯಲ್ಲೇ ವಾಸಿಸುತ್ತವೆ. ಹಗಲು ಸೊಪ್ಪು ಸದೆಗಳ ಕುಪ್ಪೆಗಳಡಿಯಲ್ಲಿ, ದಿಮ್ಮಿಗಳ ತಳಭಾಗದಲ್ಲಿ ಹುದುಗಿದ್ದು ರಾತ್ರಿಯಲ್ಲಿ ಮಾತ್ರ ಹೊರ ಹೊರಡುತ್ತವೆ. ಚಳಿಗಾಲದಲ್ಲಿ, ಶುಷ್ಕ ವಾತಾವರಣವಿರುವ ಕಾಲಗಳಲ್ಲಿ ಇವು ನೆಲದಲ್ಲಿ ಬಿಲಗಳನ್ನು ತೋಡಿಕೊಂಡು ಹುದುಗಿದ್ದು ಸುಪ್ತವಾಗಿರುತ್ತವೆ. ಈ ಕಾಲದಲ್ಲಿ ಇವುಗಳ ಮ್ಯಾಂಟಲಿನ ಅಂಚು ಹೊರಬಂದು ಒಟ್ಟುಗೂಡಿ ಚಿಪ್ಪಿನ ತೆರಪಿನ ಬಳಿ ಒಂದು ರಕ್ಷಾಪೊರೆಯನ್ನು ಉತ್ಪಾದಿಸಿಕೊಳ್ಳುತ್ತವೆ. ಸಿಹಿನೀರಿನ ಶಂಭುಕಗಳಲ್ಲಿ, ಅವು ವಾಸಿಸುವ ಕೆರೆಕುಂಟೆಗಳು ಒಣಗಿ ಹೋದಾಗ, ಈ ರೀತಿಯ ಸುಪ್ತಾವಸ್ಥೆ ಕಂಡುಬರುತ್ತದೆ.

ಬಹುಪಾಲು ಗ್ಯಾಸ್ಟ್ರಾಪೊಡಗಳ ಶುದ್ಧೀಕರಣ ಕ್ರಿಯೆಯಲ್ಲಿ ಅವುಗಳ ಜೀರ್ಣಗ್ರಂಥಿ ಸ್ವಲ್ಪಮಟ್ಟಿನ ಪಾತ್ರವಹಿಸುತ್ತದೆ. ಈ ಅಂಗವನ್ನು ಪರಿಶೀಲಿಸಿದಾಗ ಅದರಲ್ಲಿ ಶುದ್ಧೀಕರಣ ಕೋಶಗಳು ಇರುವುದು ಕಂಡುಬಂದಿದೆ. ಇವು ತ್ಯಾಜ್ಯವಸ್ತುಗಳನ್ನು ಸಂಗ್ರಹಿಸಿ ಜಠರ ಮತ್ತು ಕರುಳಿನ ಮೂಲಕ ಹೊರಸಾಗಿಸುತ್ತವೆ.

ರಕ್ತಪರಿಚಲನೆ: ನುಲಿಗೆಯಿಂದಾಗಿ ಗ್ಯಾಸ್ಟ್ರಾಪೊಡಗಳ ಹೃದಯ ಅಂಗಸ ರಾಶಿಯ ಮುಂಭಾಗಕ್ಕೆ ಬಂದಿದೆ. ಈ ಒಂದು ಬದಲಾವಣೆಯನ್ನು ಬಿಟ್ಟರೆ ಆರ್ಕಿಗ್ಯಾಸ್ಟ್ರಾಪೊಡಗಳ ರಕ್ತಪರಿಚಲನೆ ಆದಿಮಾಲಸ್ಕಗಳಲ್ಲಿರುವಂತೆಯೇ ಇದೆ. ಇವುಗಳಲ್ಲಿ ಎರಡು ಹೃತ್ಕರ್ಣಗಳಿವೆ. ಉಳಿದ ಎಲ್ಲ ಗ್ಯಾಸ್ಟ್ರಾಪೊಡಗಳಲ್ಲೂ ಬಲ ಹೃತ್ಕರ್ಣ ಕ್ಷೀಣವಾಗಿದೆ. ಕೆಲವದರಲ್ಲಂತೂ ಈ ಹೃತ್ಕರ್ಣ ಸಂಪೂರ್ಣವಾಗಿ ಮಾಯವಾಗಿದೆ. ಬಲಹೃತ್ಕರ್ಣ ನಶಿಸಿಹೋಗಿರುವುದರಿಂದ ಬಲಭಾಗದ ಕಿವಿರು ಕೂಡ ಮಾಯವಾಗಿದೆ. ಗ್ಯಾಸ್ಟ್ರಾಪೊಡಗಳ ಹೃತ್ಕುಕ್ಷಿಯಿಂದ ಮೋಟಾಗಿರುವ ಒಂದು ಅಯೋರ್ಟ ಹೊರಡುತ್ತದೆ. ಇದು ಎರಡು ಕವಲುಗಳಾಗಿ ವಿಭಾಗಗೊಳ್ಳುತ್ತದೆ. ಮೊದಲನೆಯ ಕವಲು (ಹಿಂಭಾಗದ ಅಂಗಸದ ಅಪಧಮನಿ) ಅಂಗಸರಾಶಿಗೆ ರಕ್ತವನ್ನೊದಗಿಸುತ್ತದೆ. ಎರಡನೆಯದು (ಮುಂಭಾಗದ ಶಿಖರದ ಅಪಧಮನಿ) ತಲೆ ಮತ್ತು ಪಾದಗಳಿಗೆ ರಕ್ತವನ್ನು ಒದಗಿಸುತ್ತದೆ. ಇದರ ಒಂದು ಭಾಗ ಅಗಲವಾಗಿ ಎರಡನೆಯ ಹೃದಯವಾಗುವುದೂ ಉಂಟು. ಉದಾ: ಬ್ಯೂಸಿಕಾನ್. ಎರಡನೆಯ ಹೃದಯ ಬಹುಶಃ ರಕ್ತದ ಒತ್ತಡವನ್ನು ನಿಯಂತ್ರಿಸುತ್ತದೆ. ರಕ್ತ ಮೂತ್ರಕೋಶದಿಂದ ಕಿವಿರಿನ ಮೂಲಕ ಇಲ್ಲವೆ ನೇರವಾಗಿಯೇ ಹೃದಯವನ್ನು ತಲಪುತ್ತದೆ.
ಆಹಾರ ಸೇವನೆ ಕ್ರಮ : ಗ್ಯಾಸ್ಟ್ರಾಪೊಡಗಳಲ್ಲಿ ನಾನಾರೀತಿಯ ಆಹಾರ ಸೇವನೆ ಕ್ರಮ ಇದೆ. ಸಸ್ಯಹಾರಿಗಳು, ಮಾಂಸಹಾರಿಗಳು, ಕೊಳೆತಿನಿಗಳು ಹೀಗೆ ಎಲ್ಲ ಬಗೆಯ ಪ್ರಾಣಿಗಳೂ ಇವೆ. ಕೆಲವು ಬಗೆಯವು ಶಿಲಕೆಗಳ ಸಹಾಯದಿಂದ ಆಹಾರವನ್ನು ಹಿಡಿದರೆ ಇನ್ನು ಕೆಲವು ಪರಾವಲಂಬಿಗಳು. ಸಾಮಾನ್ಯವಾಗಿ ಗ್ಯಾಸ್ಟ್ರಾಪೊಡುಗಳಲ್ಲಿ ಆಹಾರ ಸೇವನೆಗೆ ರ್ಯಾಡ್ಯುಲ ಎಂಬ ರಚನೆಯ ಬಳಕೆಯಿದೆ. ಜೀರ್ಣಕ್ರಿಯೆ ಸ್ವಲ್ಪಮಟ್ಟಿಗೆ ಕೋಶಗಳ ಹೊರಗೆ ನಡೆಯುತ್ತದೆ. ಕೆಲವು ವಿಶಿಷ್ಟ ಜೀವಿಗಳನ್ನು ಬಿಟ್ಟರೆ ಜೀರ್ಣಕ್ರಿಯೆ ಬೇಕಾದ ಕಿಣ್ವಗಳನ್ನು ಜೊಲ್ಲು ಗ್ರಂಥಿಗಳು, ಅನ್ನನಾಳದ ಚೀಲಗಳು, ಜೀರ್ಣಾಂಗ ಗ್ರಂಥಿಗಳು ಉತ್ಪಾದಿಸುತ್ತವೆ. ಜೀರ್ಣಕ್ರಿಯೆ ನಡೆಯುವುದು ಜಠರದಲ್ಲಾದರೂ ಆಹಾರ ಹೀರಿಕೆ ನಡೆಯುವುದು ಪಿತ್ತಕೋಶದಲ್ಲಿ. ನುಲಿಗೆಯಿಂದಾಗಿ ಜಠರ 1800 ಗಳಷ್ಟು ತಿರುಚಿಕೊಂಡಿರುವುದರಿಂದ ಅನ್ನನಾಳ ಜಠರವನ್ನು ಹಿಂತುದಿಯಿಂದ ಸೇರುವಂತೆಯೂ ಕರಳು ಜಠರದ ಮುಂತುದಿಯಿಂದ ಹೊರಡುವಂತೆಯೂ ಇವೆ. ಮುಂದುವರಿದ ಗ್ಯಾಸ್ಟ್ರಾಪೊಡಗಳಲ್ಲಿ ಮಾತ್ರ ಅನ್ನನಾಳ ಜಠರದ ಮುಂತುದಿಯ ಭಾಗಕ್ಕೆ ಬಂದು ಸೇರಿಕೊಳ್ಳುವಂತೆ ಮಾರ್ಪಾಟುಗಳು ನಡೆದಿವೆ.

ರ್ಯಾಡ್ಯುಲ ಬಹುಪಾಲು ಗ್ಯಾಸ್ಟ್ರಾಪೊಡುಗಳಲ್ಲಿ ಬಲುಚೆನ್ನಾಗಿ ರೂಪುಗೊಂಡ ರಚನೆಯಾದರೂ ಕೆಲವು ಪ್ರಭೇಧಗಳಲ್ಲಿ ಇಲ್ಲವೆ ಇಲ್ಲ. ರ್ಯಾಡ್ಯುಲದಲ್ಲಿ 3 ಸಾಲುಗಳಲ್ಲಿ ಜೋಡಣೆಗೊಂಡಿರುವ ಹಲ್ಲುಗಳಿವೆ. ಇವುಗಳ ಸಂಖ್ಯೆ 16-750,000. ಹಲ್ಲುಗಳ ಆಕಾರ ಮತ್ತು ರಚನೆಗಳಲ್ಲಿ ಸಾಲಿನಿಂದ ಸಾಲಿಗೆ ಅನೇಕ ವ್ಯತ್ಯಾಸಗಳಿವೆ. ಗ್ಯಾಸ್ಟ್ರಾಪೊಡ ವರ್ಗದ ವಿವಿಧ ಉಪಗುಂಪುಗಳಲ್ಲಿ ಈ ವ್ಯತ್ಯಾಸಗಳನ್ನು ಸ್ಪಷ್ಟವಾಗಿ ಕಾಣಬಹುದಾಗಿದ್ದು ಒಂದೊಂದು ಗುಂಪೂ ತನಗೆ ವಿಶಿಷ್ಟವಾದ ರಚನಾವ್ಯತ್ಯಾಸಗಳನ್ನು ತೋರುತ್ತದೆ. ಇದರಿಂದಾಗಿ ಗ್ಯಾಸ್ಟ್ರಾಪೊಡದ ವರ್ಗೀಕರಣದಲ್ಲಿ ರ್ಯಾಡ್ಯುಲದ ಪಾತ್ರ ಮುಖ್ಯವಾದ್ದು.

	ನಿಮ್ನರೀತಿಯ ಪಚನಕ್ರಿಯೆಯನ್ನು ಆರ್ಕಿಗ್ಯಾಸ್ಟ್ರಪೊಡಗಳಾದ ಡಯೋಡೋರ, ನೆರಿಟೈನ, ಮಾನೊಡಾಂಟ ಮುಂತಾದವುಗಳಲ್ಲಿ ಕಾಣಬಹುದು.

ಇವು ಸ್ಪಂಜು ಪ್ರಾಣಿಗಳನ್ನು ತಿನ್ನುತ್ತವೆ. ಆಹಾರ ಜೀವಿಗಳನ್ನು ತಮ್ಮ ರ್ಯಾಡ್ಯುಲದಿಂದ ಉಜ್ಜಿ ಅದರಿಂದ ಒಸರುವ ವಸ್ತುಗಳನ್ನು ಜೊಲ್ಲುಗ್ರಂಥಿಗಳು ಸ್ರವಿಸುವ ಲೋಳೆಯೊಂದಿಗೆ ಸೇರಿಸಿ ನುಂಗುತ್ತವೆ. ಇವುಗಳ ಅನ್ನನಾಳದ ಇಕ್ಕೆಲದಲ್ಲಿರುವ ಚೀಲಗಳು ಜೀರ್ಣಕ್ರಿಯೆಗೆ ಬೇಕಾದ ಕೆಲವು ಕಿಣ್ವಗಳನ್ನು ಉತ್ಪತ್ತಿ ಮಾಡುತ್ತದೆ. ಉಳಿದ ಕಿಣ್ವಗಳು ಜೀರ್ಣ ಗ್ರಂಥಿಯಲ್ಲಿ ಉತ್ಪತ್ತಿಯಾಗುತ್ತವೆ.
ಅನ್ನನಾಳಕ್ಕೆ ಹತ್ತಿರದಲ್ಲಿರುವ ಜಠರಭಾಗವನ್ನು ಕೈಟಿನಿನಿಂದ ರಚಿತವಾದ ಏಣುಗಳಿವೆ. ಈ ಭಾಗಕ್ಕೆ ಆಹಾರವಸ್ತುಗಳನ್ನು ಬೇರ್ಪಡಿಸುವ ಭಾಗವೆಂದು ಹೆಸರು. ಕರುಳಿನ ಹತ್ತಿರದಲ್ಲಿರುವ ಜಠರದ ಭಾಗ ತ್ರಿಕೋನಾಕಾರಕ್ಕಿದ್ದು ಸ್ಟೈಲ್ ಚೀಲ ಎಂಬ ರಚನೆಯಾಗಿದೆ. ಇದರ ಉದ್ದಕ್ಕೂ ಒಂದು ಆಳವಾದ ತೋಡು ಇದೆ. ಈ ತೋಡು ಸ್ಟೈಲ್ ಚೀಲಕ್ಕೂ ಜಠರಕ್ಕೂ ಸಂಪರ್ಕ ಕಲ್ಪಿಸುತ್ತದೆ. ಆಹಾರವನ್ನು ವಿಂಗಡಿಸುವ ಭಾಗ ಜಠರ ಜೀರ್ಣಿಸಲಾಗದ ಪದಾರ್ಥಗಳನ್ನು ಬೇರ್ಪಡಿಸಿ ಸ್ಟೈಲ್ ಚೀಲದೊಳಕ್ಕೂ ಜೀರ್ಣವಾಗುವಂಥ ಆಹಾರವನ್ನು ಲೋಳೆಯೊಂದಿಗೆ ಮಿಶ್ರಿಸಿ ಚಂಡಿನಂತೆ ಮಾಡಿ ಕರುಳಿನೊಳಕ್ಕೂ ನೂಕುತ್ತದೆ. ಉಳಿದ ಉಚ್ಚಮಟ್ಟದ ಗ್ಯಾಸ್ಟ್ರಾಪೊಡುಗಳಲ್ಲಿ ಬಲು ಸರಳ ರೀತಿಯ ಜಠರ ಇದೆ. ಇದರಲ್ಲಿ ಕೈಟಿನಿನ ಲೇಪನ, ವಿಂಗಡಣಾ ವಿಭಾಗ, ಸ್ಟೈಲ್ ಚೀಲ ಮುಂತಾದವು ಇಲ್ಲ.

ಪ್ರೋಸೋಬ್ರ್ಯಾಂಕ್, ಒಫಿಸ್ತೊಬ್ರ್ಯಾಂಕ್ ಮತ್ತು ಪಲ್ಮನೇಟಗಳ ಸಸ್ಯಹಾರಿ ಬಗೆಗಳಲ್ಲಿ ರ್ಯಾಡ್ಯುಲದಲ್ಲಿ ಹಲ್ಲುಗಳು ಅಸಂಖ್ಯಾತವಾಗಿವೆ. ಇವುಗಳ ಅಂಗುಳದ ಮೇಲಿನ ಅಂಚಿನಲ್ಲಿ ಕೈಟಿನಿಂದ ಕೂಡಿದ ದವಡೆಯಿದೆ. ಬಹುಪಾಲು ಪ್ರಭೇದಗಳಲ್ಲಿ ಅನ್ನನಾಳ ಅಗಲವಾದ ಮೇತೆಯಂತೆ ಹಿಗ್ಗಿದೆ. ಇದನ್ನು ಜಠರದ ಮುಂಭಾಗದಲ್ಲಿ ಕಾಣಬಹುದು. ಮೇತೆಯಲ್ಲಿ ಆಹಾರ ತಾತ್ಕಾಲಿಕವಾಗಿ ಸಂಗ್ರಹವಾಗುತ್ತದೆ. ಜೀರ್ಣಗ್ರಂಥಿಗಳಲ್ಲಿ ಉತ್ಪತ್ತಿಯಾದ ಕಿಣ್ವಗಳು ಇದರೊಳಕ್ಕೆ ಬರುತ್ತವೆ. ಅಪ್ಲೀಸಿಯದಲ್ಲಿ ಮೇತೆಯ ಗೋಡೆಯ ಮೇಲೆ ಕೈಟಿನ್ ತಟ್ಟೆಗಳಿವೆ. ಇದು ಗಿಜûರ್ಡಿನಂತೆ ಕಾರ್ಯ ನಿರ್ವಹಿಸುತ್ತದೆ.
ಮಾಂಸಹಾರಿಗಳಾದ ಕೆಲವು ಪ್ರೋಸೋಬ್ರ್ಯಾಂಕ್, ಒಫಿಸ್ರೊವ್ರ್ಯಾಂಕ್ ಮತ್ತು ಪಲ್ಮನೇಟಗಳ ರ್ಯಾಡ್ಯುಲದಲ್ಲಿ ಅತಿ ದೊಡ್ಡ ಹಲ್ಲುಗಳು ಇವೆ. ಹಲ್ಲುಗಳ ಸಂಖ್ಯೆ ಕಡಿಮೆ. ಪ್ರೋಸೋಬ್ರ್ಯಾಂಕ್‍ಗಳಲ್ಲಿ ದವಡೆಗಳಿಲ್ಲ. ಬಾಯಂಗುಳ ಮಡಿಸಿಕೊಂಡಂತಾಗಿ ಸೊಂಡಿಲಿನಂಥ ರಚನೆಯಾಗಿ ರೂಪುಗೊಂಡಿದೆ. ಈ ಸೊಂಡಿಲಿನ ಒಳಾವರಣದಲ್ಲಿ ಅನ್ನನಾಳದ ವರೆಗೂ ಹರಡಿರುವ ರ್ಯಾಡ್ಯುಲಗಳಿವೆ. ಆಹಾರ ಸೇವನೆಯ ಕಾಲದಲ್ಲಿ ರ್ಯಾಡ್ಯುಲಗಳು ಸೊಂಡಿಲಿನ ತುದಿಯಿಂದ ಹೊರಚಾಚಿಕೊಳ್ಳುತ್ತವೆ. ಆಹಾರ ಸೇವನೆ ಮುಗಿದ ಅನಂತರ ಸೊಂಡಿಲು ಒಳಗೆಳೆಯಲ್ಪಡುತ್ತದೆ. ಸೊಂಡಿಲನ್ನು ಇಟ್ಟುಕೊಳ್ಳುವುದಕ್ಕಾಗಿಯೇ ಬಾಯಲ್ಲಿ ಒಂದು ಪ್ರತ್ಯೇಕ ಅವಕಾಶವಿದೆ. ಕೆಲವು ಪ್ರೋಸೋಬ್ರ್ಯಾಂಕ್ ಕುಟುಂಬಗಳಲ್ಲಿ, ಮುಖ್ಯವಾಗಿ ಮ್ಯೂರಿಸಿಡೀ ಕುಟುಂಬದಲ್ಲಿ ಕಪ್ಪೆಚಿಪ್ಪಿನ ಹುಳುಗಳನ್ನು ತಿನ್ನಬಲ್ಲಂಥ ಜೀವಿಗಳಿವು. ಇವು ಆಹಾರಜೀವಿಯ ಚಿಪ್ಪನ್ನು ತಮ್ಮ ರ್ಯಾಡ್ಯುಲದಿಂದ ಕೊರೆದು ಚಿಪ್ಪಿನ ಒಳಗಿರುವ ಮೃದು ಶರೀರವನ್ನು ಹೀರುತ್ತವೆ. ಉದಾ: ಯೂರೊಸ್ಯಾಲ್ಪಿಂಕ್ಸ್, ಮ್ಯೂರೆಕ್ಸ್, ಯೂಪ್ಲ್ಯೂರ ಇತ್ಯಾದಿ.

	ಕಡಲಿನಲ್ಲಿ ವಾಸಿಸುವ ಪ್ರೋಸೋಬ್ರ್ಯಾಂಕ್‍ಗಳ ಒಂದು ಜಾತಿಯಾದ ಕೋನಸ್ ಎಂಬುದು ಜೀವಂತ ಮೀನುಗಳನ್ನೂ ಕಡಲ ಅನೆಲಿಡಗಳನ್ನೂ ತಿನ್ನುತ್ತದೆ. ಇದು ತನ್ನ ಹರಿತವಾದ ರ್ಯಾಡ್ಯುಲಗಳಿಂದ ಆಹಾರಜೀವಿಗಳನ್ನು ತಿವಿದು ಅದರೊಳಕ್ಕೆ ತೀಕ್ಷ್ಣ ಬಗೆಯ ವಿಷವನ್ನು ಹೊಗಿಸಿ ಕೊಲ್ಲುತ್ತದೆ.

ಶಿಲಕೆಗಳ ಸಹಾಯದಿಂದ ಆಹಾರ ಸೇವನೆ : ಕೆಲವು ಗ್ಯಾಸ್ಟ್ರಾಪೊಡಗಳು ತಮ್ಮ ಶಿಲಕೆಗಳ ಸಹಾಯದಿಂದ ನೀರಿನಲ್ಲಿರುವ ಪ್ಲಾಂಕ್ಟನ್ ಮುಂತಾದ ಆಹಾರವನ್ನು ಶೋಧಿಸಿ ಸೇವಿಸುತ್ತವೆ. ಉದಾ: ಕ್ರೆಪಿಡ್ಯುಲ, ಸ್ಟ್ರಾಂಬಸ್ ಮತ್ತು ವರ್ಮಿಟಸ್. ಇಂಥ ಪ್ರಾಣಿಗಳಲ್ಲಿ ಪ್ರೋಟಿನ್ ವಸ್ತುವಿನಿಂದ ರಚಿತವಾದ ಸಲಕೆಯಂಥ ಸ್ಟೈಲ್ ಇರುತ್ತದೆ. ಜಠರದ ಹಿಂತುದಿಯ ಸ್ಟೈಲ್ ಚೀಲದಿಂದ ಉತ್ಪತ್ತಿಯಾಗುವ ಇದು ಜಠರದ ಕರಳು ಭಾಗದಲ್ಲಿ ಹುದುಗಿರುತ್ತದೆ. ಆಹಾರ ಜೀರ್ಣವಾಗುವ ಕಾಲದಲ್ಲಿ ಶಿಲಕೆಗಳ ಸಹಾಯದಿಂದ ಇದು ತಿರುಗುತ್ತಿದ್ದು ಆಹಾರ ಬೆರೆಯುವುದಕ್ಕೂ ಜೀರ್ಣವಾಗುವುದಕ್ಕೂ ಸಹಾಯ ಮಾಡುತ್ತದೆ. ಅಲ್ಲದೆ ಇದರ ಪಿಷ್ಟ ಪದಾರ್ಥಗಳನ್ನು ಜೀರ್ಣಿಸಬಲ್ಲ ಕಿಣ್ವಗಳಿವೆ.

ಕೆಲವು ಗ್ಯಾಸ್ಟ್ರಪೊಡಗಳು ಪರಾವಲಂಬಿಗಳಾಗಿವೆ. ಉದಾ : ಪಿರಾಮಿಡಿಲೇಸಿಯ. ಪೈರಮ್ ಶಂಭುಕಗಳು ಪಾಲಿಕೀಟ ಮತ್ತು ಕಪ್ಪೆಚಿಪ್ಪಿನ ಹುಳುಗಳ ಮೇಲೆ ಬಾಹ್ಯ ಪರಾವಲಂಬಿಗಳಾಗಿ ಜೀವನ ಸಾಗಿಸಿದರೆ ಸ್ಟೈಲಿಫರ್ ಎಂಬುದು ನಕ್ಷತ್ರಮೀನುಗಳ ದೇಹದೊಳಗೂ ಎಂಟೋಕಾಂಕ ಎಂಬುದು ಕಡಲಸೌತೆಗಳ ಅಂಗಾಂಗಗಳ ಒಳಗೂ ಇದ್ದು ಅಂತರ್ ಪರಾವಲಂಬಿಗಳಾಗಿ ಜೀವನ ನಡೆಸುತ್ತವೆ.

ನರಮಂಡಲ : ಗ್ಯಾಸ್ಟ್ರಾಪೊಡಗಳ ನರಮಂಡಲ ಸಂಕೀರ್ಣ ಮಾದರಿಯದು. ಇದರಲ್ಲಿ ನಿರ್ದಿಷ್ಟವಾದ ನರಮುಡಿಗಳನ್ನು ಕಾಣಬಹುದು. ನುಲಿಗೆ ಪೂರ್ವ ಸ್ಥಿತಿಯಲ್ಲಿ ಇದು ಹೇಗಿತ್ತು ಎಂಬುದನ್ನು ತಿಳಿದುಕೊಂಡರೆ ನುಲಿಗೆಗೊಳಗಾದ ಮೇಲೆ ಇದರಲ್ಲಿ ಉಂಟಾದ ವ್ಯತ್ಯಾಸಗಳೇನು ಎಂಬುದನ್ನು ಅರಿಯುವುದು ಸುಲಭ. ಅನ್ನನಾಳದ ಹಿಂತುದಿಯಲ್ಲಿ ಒಂದು ಜೊತೆ ಸೆರಬ್ರಲ್ ನರಮುಡಿಗಳು ಇವೆ. ಇವುಗಳಿಂದ ಹೊರಡುವ ನರಗಳು ಕಣ್ಣು, ಕರಬಳ್ಳಿಗಳು ಮುಂತಾದ ಅಂಗಗಳಿಗೆ ಹೋಗುತ್ತವೆ. ಸೆರಬ್ರಲ್ ನರಮುಡಿಗಳ ಮುಂಭಾಗದಲ್ಲಿ ಬಾಯ ಇಕ್ಕೆಲದಲ್ಲಿ ಒಂದು ಜೊತೆ ಬಕಲ್ ನರಮುಡಿಗಳು ಇವೆ. ಇವಕ್ಕೂ ಸೆರಬ್ರಲ್ ನರಮುಡಿಗಳೂ ನರತಂತುಗಳ ಸಂಪರ್ಕ ಇದೆ. ಬಕಲ್ ನರಮುಡಿಗಳಿಂದ ರ್ಯಾಡ್ಯುಲದ ಸ್ನಾಯುಗಳಿಗೂ ಬಾಯಂಗಳಕ್ಕೂ ನರಗಳು ಹೋಗುತ್ತವೆ. ಪ್ರತಿಯೊಂದು ಸೆರಬ್ರಲ್ ನರಮುಡಿಯಿಂದ ಅನ್ನನಾಳದ ಇಕ್ಕೆಲದಲ್ಲಿ ತಳಭಾಗಕ್ಕೆ ಒಂದು ನರಹುರಿ ಹೊರಡುತ್ತದೆ. ಇವಕ್ಕೆ ಪಾದದ ನರಹುರಿಗಳು ಎಂದು ಹೆಸರು. ಇವು ಪಾದದ ಮಧ್ಯಭಾಗದಲ್ಲಿರುವ ಪಾದದ ನರಮುಡಿಗಳಿಗೆ ತಲಪುತ್ತವೆ. ಪಾದದ ನರಮುಡಿಗಳಿಂದ ನರತಂತುಗಳು ಹೊರಟು ಪಾದದ ಸ್ನಾಯುಗಳನ್ನು ತಲಪುತ್ತವೆ. ಸೆಬ್ರಲ್ ನರಮುಡಿಗಳಿಂದ ಮತ್ತೊಂದು ಜೊತೆ ನರಹುರಿಗಳು ಹೊರಡುತ್ತವೆ. ಇವಕ್ಕೆ ಅಂಗಸದ ನರಹುರಿಗಳೆಂದು ಹೆಸರು. ಇವು ಶಿರದ ಭಾಗದಿಂದ ಹೊರಟು ಹಿಂದಕ್ಕೆ ಸಾಗಿ ಅಂಗಸರಾಶಿಯಲ್ಲಿ ಹುದುಗಿರುವ ಅಂಗಸರಾಶಿಯಲ್ಲಿ ಅಂಗಸದ ನರಮುಡಿಗಳಿಗೆ ಬಂದು ಕೊನೆಗೊಳ್ಳುತ್ತವೆ. ಅಂಗಸದ ನರಹುರಿಗಳು ಅಂಗಸರಾಶಿಯ ನರಮುಡಿಗಳನ್ನು ತಲಪುವುದಕ್ಕಿಂತ ಮುಂಚೆ ಎರಡು ಜೊತೆ ನರಮುಡಿಗಳು ಹೊರಡುತ್ತವೆ. ಮೊದಲನೆಯ ಜೊತೆ ನರಮುಡಿಗಳಿಗೆ ಪ್ಲ್ಯೂರಲ್ ನರಮುಡಿಗಳೆಂದು ಹೆಸರು. ಇವು ದೇಹದ ಮುಂತುದಿಯಲ್ಲಿವೆ. ಇವುಗಳ ನರಗಳು ಚಿಪ್ಪಿನ ಕಾಲುಮೆಲದ ಸ್ನಾಯುಗಳಿಗೆ ಹೋಗುತ್ತದೆ. ಪ್ಲ್ಯೂರಲ್ ನರಮುಡಿಗಳಿಂದ ಒಂದು ಜೊತೆ ನರಗಳು ಪೀಡಲ್ ನರಮುಡಿಗೆ ಹೋಗುತ್ತವೆ. ಇವಕ್ಕೆ ಪೀಡಲ್ ಸಂಬಂಧಿಕೆಗಳೆಂದು ಹೆಸರು. ಅಂಗಸದ ನರಹುರಿಗಳಲ್ಲಿರುವ ಎರಡನೆಯ ಜೊತೆ ನರಮುಡಿಗಳಿಗೆ ಪರೈಟಲ್ ನರಮುಡಿಗಳೆಂದು ಹೆಸರು. ಇವು ದೇಹದ ಹಿಂಭಾಗದಲ್ಲಿವೆ. ಇವುಗಳ ನರಗಳು ಆಸ್ಫ್ರಾಡಿಯ, ಮ್ಯಾಂಟಲ್ ಮತ್ತು ಕಿವಿರುಗಳಿಗೆ ಸಾಗುತ್ತವೆ. ಅಂಗಸದ ನರಮುಡಿಗಳಿಂದ ನರಗಳು ಅಂಗಸರಾಶಿಯ ವಿವಿಧ ಅಂಗಗಳಿಗೆ ಹೋಗುತ್ತವೆ. ಈ ರೀತಿಯ ನರಜಾಲ ನುಲಿಗೆಪೂರ್ವಸ್ಥಿತಿಯಲ್ಲಿ ಕಂಡುಬರುತ್ತದೆ.
ನುಲಿಗೆಯಿಂದಾಗಿ ಗ್ಯಾಸ್ಟ್ರಾಪೊಡಗಳ ನರಮಂಡಲದಲ್ಲಿ ಕೆಲವು ವ್ಯತ್ಯಾಸಗಳು ಉಂಟಾಗಿವೆ. ಪೂರ್ವಸ್ಥಿತಿಯಲ್ಲಿ ಸಮಪಾಶ್ರ್ವ ಸ್ಥಿತಿಯಲ್ಲಿರುವ ನರಮಂಡಲ ನುಲಿಗೆಯಾದ ಮೇಲೆ ಅಸಮಪಾಶ್ರ್ವ ರೀತಿಯದ್ದಾಗಿ 8 ಅಂಕಿಯಂತಾಗಿದೆ. ನುಲಿಗೆಯಿಂದ ನರಗಳ ಮೂಲಸ್ಥಾನ ಅದಲು ಬದಲಾಗಿದೆ. ನುಲಿಗೆ ಪೂರ್ವಸ್ಥಿತಿಯಲ್ಲಿದ್ದ ಬಲಗಡೆಯ ಪರೈಟಲ್ ನರಮುಡಿ ಈಗ ಎಡಕ್ಕೂ ಎಡಗಡೆಯ ಪರೈಟಲ್ ನರಮುಡಿ ಬಲಕ್ಕೂ ತಿರುಚಿಕೊಂಡಿವೆ. ಜೊತೆಗೆ ಎಡಕ್ಕೆ ಬಂದ ನರಮುಡಿ ಅಂಗಸರಾಶಿಯ ಮೇಲ್ಭಾಗಕ್ಕೆ ಹಾಗೂ ಮುಂಭಾಗಕ್ಕೆ ಸರಿಯುತ್ತದೆ. ಇದರಿಂದಾಗಿ ಇವನ್ನು ಸುಪ್ರ ಪರೈಟಲ್ ನರಮುಡಿ ಮತ್ತು ಇನ್ನ್ರಪರೈಟಲ್ ನರಮುಡಿ ಎಂದು ಕರೆಯಲಾಗುತ್ತದೆ. ನುಲಿಗೆಯಿಂದ ದೇಹದ ಮುಂಭಾಗದಲ್ಲಿರುವ ಪ್ಲ್ಯೂರಲ್ ನರಮುಡಿಗಳ ಸ್ಥಾನಮಾನಗಳಲ್ಲಿ ಮಾತ್ರ ಯಾವ ಬದಲಾವಣೆಯೂ ಆಗಿಲ್ಲ.

ನರಮಂಡಲದ ನುಲಿಗೆ ಗ್ಯಾಸ್ಟ್ರಾಪೊಡ ನರಮಂಡಲದ ಆದಿಮ ಸ್ಥಿತಿಯನ್ನು ತೋರಿಸುತ್ತದೆ. ಏಕೆಂದರೆ ನುಲಿಗೆ ಕ್ರಿಯೆ ಗ್ಯಾಸ್ಟ್ರಾಪೊಡಗಳ ವಿಕಾಸದ ಪ್ರಥಮದಲ್ಲೇ ನಡೆದಿರುವ ಕ್ರಿಯೆ. ಅಲ್ಲದೆ ನರಮಂಡಲದಲ್ಲಿ ಪ್ರತ್ಯೇಕವಾಗಿರುವ ನರಮುಡಿ ಮತ್ತು ನರ ಹುರಿಗಳು ಕೂಡ ಆದಿಮಾವಸ್ಥೆಯಲ್ಲಿಯೆ ಇವೆ. ಈ ರೀತಿಯ ಆದಿಮಾವಸ್ಥೆಯ ನರಮಂಡಲ ಕೆಲವು ಬದಲಾವಣೆಗಳೊಂದಿಗೆ ಹಳೆಯ ಸ್ಥಿತಿಯಲ್ಲಿಯೇ ಇರುವುದನ್ನು ಪ್ರೋಸೋಬ್ರ್ಯಾಂಕ್ ಗುಂಪಿನ ಪಟೆಲ ಮತ್ತು ಹ್ಯಾಲಿ ಯೋಟಿಸುಗಳಲ್ಲಿ ಕಾಣಬಹುದು. ಆದರೆ ಅನೇಕ ಗ್ಯಾಸ್ಟ್ರಾಪೊಡಗಳಲ್ಲಿ ವಿಕಾಸದಿಂದಾಗಿ ಈ ಮೂಲಭೂತ ವ್ಯವಸ್ಥೆ ವ್ಯತ್ಯಾಸವಾಗಿದೆ. ನರಮುಡಿಗಳು ಒಂದು ಗೂಡಿರುವುದರಿಂದ ಇವುಗಳ ಸಂಬಂಧಿಕೆಗಳು ಅತಿ ಚಿಕ್ಕವಾಗಿರುವುದು ಮತ್ತು ನರಮುಡಿಗಳು ಹಾಗೂ ನರಹುರಿಗಳು ದ್ವಿತೀಯಕ ಸಮಪಾಶ್ರ್ವ ಸ್ಥಿತಿಯನ್ನು ಗಳಿಸಿಕೊಂಡಿರುವುದು-ಇವು ಈ ವ್ಯತ್ಯಾಸಗಳಲ್ಲಿ ಮುಖ್ಯವಾದವು.

ಸಾಮಾನ್ಯವಾಗಿ ಪ್ರತಿಯೊಂದು ಪ್ರಭೇದದಲ್ಲೂ ನರಮುಡಿಗಳು ಸ್ವಲ್ಪಮಟ್ಟಿಗೆ ಕೇಂದ್ರೀಕೃತಗೊಂಡಿರುವುದು ಕಂಡುಬರುತ್ತದೆ. ಪ್ಲ್ಯೂರಲ್ ನರಮುಡಿಗಳು ಯಾವಾಗಲೂ ಸೆರಬ್ರಲ್ ನರಮುಡಿಗಳ ಪಕ್ಕದಲ್ಲಿಯೇ ಇರುತ್ತವೆ. ಅಂಗಸದ ನರಮುಡಿಗಳು ಒಂದುಗೂಡಿ ಒಂದೇ ನರಮುಡಿಯಂತಾಗಿವೆ. ಹ್ಯಾಲಿಯೋಟಿಸಿನಲ್ಲಿ ಪೀಡಲ್ ನರಮುಡಿಗಳು ಪ್ಲ್ಯೂರಲ್ ನರಮುಡಿಗಳೊಂದಿಗೆ ಸೇರಿಬಿಟ್ಟಿವೆ. ಇವನ್ನು ಪೀಡಲ್-ಪ್ಲ್ಯೂರಲ್ ನರಮುಡಿಗಳೆಂದು ಕರೆಯಲಾಗುತ್ತದೆ. ಬ್ಯೂಸಿ ಕಾನಿನಲ್ಲಿ ಅಂಗಸದ ನರಮುಡಿಗಳನ್ನು ಬಿಟ್ಟು ಉಳಿದೆಲ್ಲವೂ ದೇಹದ ಮುಂಭಾಗಕ್ಕೆ ಸರಿದು ಅನ್ನನಾಳದ ಸುತ್ತ ಸೆರಬ್ರಲ್ ನರಮುಡಿಯ ಅಡಿಯಲ್ಲಿ ಕೇಂದ್ರಿಕೃತಗೊಂಡಿವೆ. ಇವುಗಳ ಅಂಗಸ ಸಂಬಂಧಿಕೆಗಳನ್ನು ಬಿಟ್ಟು ಉಳಿದ ಎಲ್ಲ ಸಂಬಂಧಿಕೆಗಳೂ ಮಾಯವಾಗಿವೆ. ಪಲ್ಮನೇಟಗಳಲ್ಲಿ ಅಂಗಸದ ನರಮುಡಿ ಸಹ ಮುಂಭಾಗಕ್ಕೆ ಸರಿದುಬಿಟ್ಟಿದೆ. ಇದರಿಂದ ಸಂಬಂಧಿಕೆಗಳ ಉದ್ದ ಕಡಿಮೆಯಾಗಿ ನರಮಂಡಲ ದ್ವಿತೀಯಕ ಸಮಪಾಶ್ರ್ವ ಸ್ಥಿತಿಯನ್ನು ತಲುಪಿದೆ. ಒಫಿಸ್ತೊಬ್ರ್ಯಾಂಕುಗಳಲ್ಲಿ ವಿನುಲಿಗೆಯಿಂದಾಗಿ ಅಂಗಸದ ನರಹುರಿಗಳು ಸಮಪಾಶ್ರ್ವ ಸ್ಥಿತಿಯನ್ನು ಗಳಿಸಿಕೊಂಡಿವೆ. ಅಪ್ಲೀಸಿಯದಲ್ಲಿ ಎಡಗಡೆಯ ಪರೈಟಲ್ ನರಮುಡಿ ಮಾಯವಾಗಿ ಬಲಗಡೆಯ ನರಮುಡಿ ಒಂದುಗೂಡಿರುವ ಅಂಗಸದ ನರಮುಡಿಗಳ ಪಕ್ಕದಲ್ಲಿದೆ.

ಜ್ಞಾನೇಂದ್ರಿಯಗಳು : ಕಣ್ಣು, ಕರಬಳ್ಳಿ, ಆಸ್ಫ್ರಾಡಿಯ ಮತ್ತು ಸ್ಟ್ಯಾಟೊಸಿಸ್ಟುಗಳೇ ಗ್ಯಾಸ್ಟ್ರಾಪೊಡಗಳ ಜ್ಞಾನೇಂದ್ರಿಯಗಳು.
ಕಣ್ಣುಗಳು ಶಿರದ ಕರಬಳ್ಳಿಗಳ ತಳದಲ್ಲಿವೆ. ಪಟೆಲದಲ್ಲಿ ಇವು ಸರಳ ಕುಳಿಗಳಂತಿವೆ. ಇವುಗಳೊಳಗೆ ಬೆಳಕನ್ನು ಗ್ರಹಿಸಬಲ್ಲ ಅಂಗವೂ ವರ್ಣದ್ರವ್ಯಕೋಶಗಳೂ ಇವೆ. ಅದರೆ ಉಳಿದ ಎಲ್ಲ ಉನ್ನತ ಗ್ಯಾಸ್ಟ್ರಾಪೊಡಗಳಲ್ಲಿ ಕುಳಿ ಮುಚ್ಚಿ ಹೋಗಿ ಅದರಲ್ಲಿ ಕಾರ್ನಿಯ ಮತ್ತು ಮಸೂರಗಳು ಬೆಳೆದುಕೊಂಡಿವೆ. ಕರಬಳ್ಳಿಯ ಬುಡದಲ್ಲಿರುವ ಕಣ್ಣುಗಳ ದ್ಯುತಿಗ್ರಾಹಕ ಅಂಗ ಯಾವಾಗಲೂ ಬೆಳಕಿನ ಮೂಲದೆಡೆಗೆ ನಿರ್ದೇಶಿತವಾಗಿರುತ್ತದೆ. ಹೆಟರಾಪೊಡ ಗುಂಪಿನ ಶಂಭುಕಗಳು ಕಣ್ಣುಗಳು ಉನ್ನತಮಟ್ಟದವಾಗಿದ್ದು ಮೀನುಗಳ ಕಣ್ಣಿಗಿಂತಲೂ ಉಚ್ಚಮಟ್ಟದವು ಎಂದು ಹೇಳಲಾಗಿದೆ. ಇಷ್ಟಾದರೂ ಗ್ಯಾಸ್ಟ್ರಾಪೊಡಗಳ ಕಣ್ಣಿನ ಕೆಲಸ ಕೇವಲ ಬೆಳಕನ್ನು ಗ್ರಹಿಸುವುದು ಮಾತ್ರ.

ಪ್ರೋಸೋಬ್ರ್ಯಾಂಕ್‍ಗಳಲ್ಲಿ ಕೇವಲ ಒಂದು ಜೊತೆ ಶಿರದ ಕರಬಳ್ಳಿಗಳಿದ್ದರೆ ಒಫಿಸ್ತೊಬ್ರ್ಯಾಂಕ್ ಹಾಗೂ ಪಲ್ಮನೇಟಗಳಲ್ಲಿ ಎರಡು ಜೊತೆ ಇವೆ. ಇವು ಕಣ್ಣುಗಳಿಗೆ ಆಶ್ರಯವಾಗಿರುವುದೊಂದೇ ಅಲ್ಲದೆ ಇವುಗಳಲ್ಲಿ ಸ್ಪರ್ಶವೇದಿ ಹಾಗೂ ರಸಗ್ರಾಹಿ ಜೀವಕೋಶಗಳಿವೆ. ನ್ಯೂಡಿಬ್ರ್ಯಾಂಕುಗಳಲ್ಲಿ ಕರಬಳ್ಳಿಯ ಮೇಲಿನ ಅರ್ಧ ಭಾಗ ಫಲಕದಂತೆ ಅಗಲವಾಗಿದೆ. ಇದರಲ್ಲಿ ಮಡಿಕೆಗಳು ಬೆಳೆದಿವೆ. ಇವು ರಸಗ್ರಾಹಿಗಳು. ಇವಕ್ಕೆ ರೈನೋಫೋರುಗಳೆಂದು ಹೆಸರು.

ಗ್ಯಾಸ್ಟ್ರಾಪೊಡಗಳ ಪಾದಗಳಲ್ಲಿ ಪೀಡಲ್ ನರಮುಡಿಯ ಬಳಿ ಒಂದು ಜೊತೆ ಸ್ಟ್ಯಾಟೋಸಿಸ್ಟುಗಳಿವೆ. ನ್ಯೂಡಿಬ್ರ್ಯಾಂಕ್‍ಗಳಲ್ಲಿ ಮತ್ತು ಕೆಲವು ಒಫಿಸ್ತೊಬ್ರ್ಯಾಂಕ್‍ಗಳಲ್ಲಿ ಸ್ಟ್ಯಾಟೋಸಿಸ್ಟುಗಳು ಸೆರಬ್ರಲ್ ನರಮುಡಿಯ ಒಳಗೆ ಸರಿದಿರುವುದು ಕಂಡುಬರುತ್ತದೆ. ಇವು ದೇಹದ ಸಮತೋಲನ ಸ್ಥಿತಿಯನ್ನು ಕಾಯ್ದಿರಿಸಲು ಸಹಾಯಕವಾಗಿವೆ. ಗ್ಯಾಸ್ಟ್ರಾಪೊಡಗಳ ಆಸ್ಫ್ರಾಡಿಯಗಳಿಗೂ ಕಿವಿರುಗಳ ವಿಕಾಸಕ್ಕೂ ಸಂಬಂಧವಿದೆ. ಆರ್ಕಿಗ್ಯಾಸ್ಟ್ರಾಪೊಡಗಳಲ್ಲಿ ಪ್ರತಿ ಕಿವಿರಿನಲ್ಲಿಯೂ ಒಂದೊಂದು ಆಸ್ಫ್ರಾಡಿಯಮ್ ಇದೆ. ಉಳಿದ ಪ್ರೋಸೊಬ್ರ್ಯಾಂಕುಗಳಲ್ಲಿ ಒಂದೇ ಕಿವಿರು ಇರುವುದರಿಂದ ಆಸ್ಟ್ರಾಡಿಯಮ್ ಕೂಡ ಒಂದೇ ಇದೆ. ಇದು ಮ್ಯಾಂಟಲ್ ಕುಹರದ ಗೋಡೆಯ ಮೇಲೆ ಕಿವಿರಿನ ಬುಡದ ಮುಂಭಾಗದಲ್ಲಿದೆ. ಬಹುಪಾಲು ಪ್ರಭೇದಗಳಲ್ಲಿ ಆಸ್ಫ್ರಾಡಿಯಮಿನ ಹೊರಮೈಮೇಲೆ ತಂತುಗಳಂಥ ಅಥವಾ ಮಡಿಕೆಗಳಂಥ ರಚನೆಗಳಿರುವುದರಿಂದ ಅದರ ವಿಸ್ತಾರ ಹೆಚ್ಚಿದೆ. ಸಂಪೂರ್ಣವಾಗಿ ಕಿವಿರುಗಳನ್ನು ಕಳೆದುಕೊಂಡಿರುವ ಗ್ಯಾಸ್ಟ್ರಾಪೊಡಗಳಲ್ಲಿ ಆಸ್ಫ್ರಾಡಿಯಮ್ ಇಲ್ಲ. ಯಾಂಗ್‍ನ (1947) ಪ್ರಕಾರ ಆಸ್ಫ್ರಾಡಿಯಮ್ ಕಿವಿರಿನ ಮೇಲೆ ಹರಿಯುವ ನೀರಿನಲ್ಲಿರುವ ಗಸಿಯನ್ನು ಗೊತ್ತುಹಚ್ಚುವ ಕೆಲಸವನ್ನು ನಿರ್ವಹಿಸುತ್ತದೆ.

ಜನನೇಂದ್ರಿಯಗಳು : ಅನೇಕ ಗ್ಯಾಸ್ಟ್ರಾಪೊಡಗಳು ಭಿನ್ನಲಿಂಗಿಗಳು. ಇವುಗಳ ಜನನೇಂದ್ರಿಯ ಜೀರ್ಣಗ್ರಂಥಿಯ ಮುಂಭಾಗದಲ್ಲಿ ಅಂಗಸದ ನುಲಿಗೆಗಳೊಳಗೆ ಅಡಗಿರುತ್ತದೆ. ಇದರಿಂದ ಹೊರಡುವ ನಾಳ ಸರಳವಾಗಿರಬಹುದು. ಇಲ್ಲವೇ ಸಂಕೀರ್ಣವಾಗಿರಬಹುದು. ಇದು ಬಲಗಡೆಯ ನೆಫ್ರೀಡಿಯಮಿನ ಜೊತೆಯಲ್ಲಿಯೇ ಬೆಳೆದುಬರುತ್ತದೆ. ಕ್ರಿಯಾಶೀಲವಾಗಿರುವ ಎರಡು ನೆಫ್ರೀಡಿಯಗಳನ್ನುಳ್ಳ ಆರ್ಕಿಗ್ಯಾಸ್ಟ್ರಾಪೊಡಗಳಲ್ಲಿ ಬಲಗಡೆಯ ನೆಫ್ರೀಡಿಯಮ್ ಶುಕ್ರಾಣುಗಳನ್ನು ಅಥವಾ ಅಂಡಗಳನ್ನು ಹೊರಸಾಗಿಸುವ ಕಾರ್ಯವನ್ನು ನಿರ್ವಹಿಸುತ್ತದೆ. ಲಿಂಗಾಣುಗಳು ಜನನೇಂದ್ರಿಯದಿಂದ ಹೊರಡುವ ಒಂದು ಚಿಕ್ಕನಾಳದ ಮೂಲಕ ಮೂತ್ರಕೋಶದೊಳಕ್ಕೆ ಬಂದು ಅಲ್ಲಿಂದ ನೆಫ್ರೀಡಿಯಮ್ ರಂಧ್ರದ ಮೂಲಕ ಮ್ಯಾಂಟಲ್ ಕುಹರದೊಳಕ್ಕೆ ಬರುತ್ತವೆ. ಇದರಿಂದಾಗಿ ಜನನೇಂದ್ರಿಯ ನಾಳದಲ್ಲಿ ಜನನೇಂದ್ರಿಯಕ್ಕೆ ಸಂಬಂಧಿಸಿದ ಎರಡು ಭಾಗಗಳಿವೆ. ಇಂಥ ಜನನೇಂದ್ರಿಯ ವ್ಯವಸ್ಥೆಯುಳ್ಳ ಹೆಣ್ಣುಗಳಲ್ಲಿ ಅಂಡಾಶಯದಿಂದ ಹುಟ್ಟುವ ಅಂಡಗಳ ಸುತ್ತ ಜಿಲ್ಯಾಟಿನ್ನಿನ ಒಂದು ಕವಚವಿದೆ. ಏಕೆಂದರೆ ಜನನೇಂದ್ರಿಯ ನಾಳದಲ್ಲಿ ವಿಶಿಷ್ಟತೆಯಿಲ್ಲದಿರುವುದರಿಂದ ಅಂಡಗಳಿಗೆ ಈ ರೀತಿಯ ಕವಚ ಅವಶ್ಯಕ. ಈ ಜೀವಿಗಳಲ್ಲಿ ಆಂತರಿಕ ನಿಷೇಚನ ಕ್ರಿಯೆ ನಡೆಯುವುದಿಲ್ಲ. ಆದ್ದರಿಂದ ಅಂಡಗಳು ಮ್ಯಾಂಟಲ್ ಕುರುಹದಿಂದ ನೀರಿಗೆ ಬರುತ್ತವೆ. ನೀರಿಗೆ ಬಂದ ಅಂಡಗಳು ಶುಕ್ರಾಣುಗಳಿಂದ ನಿಷೇಚನಗೊಳ್ಳುತ್ತವೆ. ಉಳಿದ ಗ್ಯಾಸ್ಟ್ರಾಪೊಡಗಳಲ್ಲಿ ಬಲಗಡೆಯ ನೆಫ್ರೀಡಿಯಮ್ ನಶಿಸಿಹೋಗಿದ್ದು ಅದರ ಸ್ವಲ್ಪ ಭಾಗ ಮಾತ್ರ ಜನನಾಂಗದ ನಾಳದೊಳಕ್ಕೆ ಸೇರಿದೆ. ಇವುಗಳಲ್ಲಿ ಜನನಾಂಗನಾಳ ಅತಿ ಉದ್ದವಾಗಿದೆ. ಇದಕ್ಕೆ ಕಾರಣ ಮ್ಯಾಂಟಲ್. ಈ ನಾಳದ ಬೆಳೆವಣಿಗೆಗೆ ಮ್ಯಾಂಟಲ್ ಕೂಡ ತನ್ನ ಸ್ವಲ್ಪ ಭಾಗವನ್ನು ದಾನ ಮಾಡಿದೆ. ಮ್ಯಾಂಟಲಿನಿಂದ ಬಂದಿರುವ ಭಾಗಕ್ಕೆ ಪೇಲಿಯಲ್ ಭಾಗ ಎಂದು ಹೆಸರು. ಇದು ಅಂಡದ ಪೊರೆಯನ್ನು ಉತ್ಪತ್ತಿಮಾಡುವ ಕೆಲಸವನ್ನು ನಿರ್ವಹಿಸುತ್ತದೆ. ಗಂಡಿನಲ್ಲಿ ಆಂತರಿಕ ನಿಷೇಚನ ಕ್ರಿಯೆಗೆ ಬೇಕಾದ ಶಿಶ್ನ ಇದೆ. ಇದು ದೇಹದ ಭಿತ್ತಿಯಿಂದ ಬಲಗಡೆಯ ಶಿರದ ಕರಬಳ್ಳಿಯ ಬಳಿ ಹುಟ್ಟಿಕೊಳ್ಳುತ್ತದೆ. ಪೇಲಿಯಲ್ ನಾಳದ ಭಾಗ ಶಿಲಿಕೆಗಳಿಂದ ಕೂಡಿದ ತೋಡಿನಂಥ ರಚನೆಯನ್ನು ಪಡೆದಿದ್ದು ಶಿಶ್ನದ ತುದಿಯಲ್ಲಿ ಹೊರೆತೆರೆಯುತ್ತದೆ. ಪೇಲಿಯಲ್ ನಾಳದ ಒಂದು ಭಾಗ ಪ್ರಾಸ್ಟೇಟ್ ಗ್ರಂಥಿಯಾಗಿ ಕೆಲಸ ಮಾಡುತ್ತದೆ.
ಹೆಣ್ಣಿನಲ್ಲಿ ಪೇಲಿಯಲ್ ನಾಳದ ಒಂದು ಭಾಗ ಅಲ್ಬ್ಯುಮಿನ್ ಗ್ರಂಥಿಯಾಗಿ ಮಾರ್ಪಟ್ಟಿದೆ. ಅಲ್ಲದೆ ಇದರ ಜೊತೆಗೆ ಒಂದು ದೊಡ್ಡ ಲೋಳೆ ಗ್ರಂಥಿ ಅಥವಾ ಸಂಪುಟ ಗ್ರಂಥಿಯೂ ಇದೆ. ಅಂಡಗಳ ಸುತ್ತ ಲೋಳೆಯಂಥ ಸಂಪುಟವನ್ನು ಉತ್ಪತ್ತಿ ಮಾಡುವುದು ಈ ಗ್ರಂಥಿಯ ಕೆಲಸ. ಪೇಲಿಯಲ್ ನಾಳದ ತುದಿಯಲ್ಲಿ ಸೆಮಿನಲ್ ರಿಸೆಪ್ಟಕಲ್ ಎಂಬ ಭಾಗವಿದೆ. ಗಂಡಿನಿಂದ ಬರುವ ಶುಕ್ರಾಣುಗಳನ್ನು ಇದು ಸಂಗ್ರಹಿಸುತ್ತದೆ. ಲಿಟ್ಟೊರೈನ, ಯೂರೊಸ್ಯಾಲ್ಪಿಂಕ್ಸ್, ಮ್ಯೂರೆಕ್ಸ್, ಬ್ಯುಸಿಕಾನ್ ಮುಂತಾದವುಗಳಲ್ಲಿ ಶುಕ್ರಾಣುಗಳು ಸೆಮಿನಲ್ ರಿಸೆಪ್ಟಕಲಿಗೆ ಬರುವುದಿಲ್ಲ. ಬದಲಾಗಿ ಅಂಡಾಶಯನಾಳದ ತುದಿಯ ಭಾಗಕ್ಕೆ ಇವು ತಲುಪುತ್ತವೆ. ಈ ಭಾಗದಲ್ಲಿ ಕಾಪ್ಯುಲೇಟರಿ ಬರ್ಸ ಎಂಬ ರಚನೆ ಇದೆ. ಇಲ್ಲಿಂದ ಶುಕ್ರಾಣು ಸೆಮಿನಲ್ ರಿಸೆಪ್ಟಕಲಿಗೆ ಬರುತ್ತವೆ. ಅಂಡಗಳು ಇಲ್ಲಿಗೆ ಬಂದಾಗ ನಿಷೇಚನ ಕ್ರಿಯೆ ನಡೆಯುತ್ತದೆ.

ಕೆಲವು ಪ್ರೋಸೋಬ್ರ್ಯಾಂಕುಗಳು, ಎಲ್ಲ ಒಫಿಸ್ತೊಬ್ರ್ಯಾಂಕ್ ಹಾಗೂ ಪಲ್ಮನೇಟಗಳು ಉಭಯಲಿಂಗಿಗಳು. ಕ್ರೆಪಿಡ್ಯುಲ ಎಳೆಯ ವಯಸ್ಸಿನಲ್ಲಿ ಗಂಡಾಗಿಯೂ ವಯಸ್ಸಾದಂತೆ ಹೆಣ್ಣಾಗಿಯೂ ಇರುತ್ತದೆ. ಇದರಲ್ಲಿರುವ ಒಂದೇ ಒಂದು ಜನನೇಂದ್ರಿಯ ಅಂಡ ಮತ್ತು ಶುಕ್ರಾಣುಗಳೆರಡನ್ನೂ ಉತ್ಪಾದಿಸಬಲ್ಲದು.

ಕಡಲ ಮೊಲ ಮತ್ತು ಅಪ್ಲೀಸಿಯದಲ್ಲಿ ಉಭಯಲಿಂಗನಾಳವಿದೆ. ಇದರಲ್ಲಿ ಅಂಡಗಳು ಹಾಗೂ ಶುಕ್ರಾಣುಗಳು ಬರುವುದಕ್ಕೆ ಪ್ರತ್ಯೇಕ ಭಾಗಗಳಿವೆ. ಅಂಡಗಳು ಬರುವ ಭಾಗಕ್ಕೆ ಅಂಡಾಶಯ ನಾಳವೆಂದೂ ಶುಕ್ರಾಣುಗಳು ಬರುವ ಭಾಗಕ್ಕೆ ವಾಸಡೆಫರೆನ್ಸ್ ಎಂದೂ ಹೆಸರು. ಅಂಡಾಶಯ ನಾಳದ ಕೊನೆಯ ಭಾಗದಲ್ಲಿ ಯೋನಿದ್ವಾರವಿದೆ. ಇದಕ್ಕೂ ಸೆಮಿನಲ್ ರಿಸೆಪ್ಟಕಲಿಗೂ ಸಂಪರ್ಕವುಂಟು. ಶಿಶ್ನದಿಂದ ಶುಕ್ರಾಣುಗಳನ್ನು ನೇರವಾಗಿ ರಿಸೆಪ್ಟಕಲ್ ಪಡೆಯುತ್ತದೆ. ಈ ಪ್ರಾಣಿಯಲ್ಲಿ ಕಾಪ್ಯುಲೇಟರಿ ಬರ್ಸ ಇದೆಯಾದರೂ ಇದರ ನಿರ್ದಿಷ್ಟ ಕೆಲಸ ತಿಳಿಯದು.

ಪಲ್ಮನೇಟಗಳ ಜನನೇಂದ್ರಿಯಗಳು ಅಪ್ಲೀಸಿಯದ ಜನನೇಂದ್ರಿಯಗಳನ್ನೇ ಹೋಲುತ್ತವಾದರೂ ಇವುಗಳಲ್ಲಿ ಕೆಲವು ವ್ಯತ್ಯಾಸಗಳುಂಟು. ಜನನೇಂದ್ರಿಯ ನಾಳದಲ್ಲಿ ಅಂಡಗಳನ್ನು ಸಾಗಿಸುವ ಭಾಗದಲ್ಲಿ ಡಾರ್ಟ್ ಚೀಲವೆಂಬ ರಚನೆಯಿದೆ. ಇದರಲ್ಲಿ ಸುಣ್ಣದಿಂದಾದ ಸ್ಪಿಕ್ಯೂಲುಗಳು ಉತ್ಪತ್ತಿಯಾಗುತ್ತವೆ.

ಭ್ರೂಣದ ಬೆಳವಣಿಗೆ: ಕೆಳಮಟ್ಟದ ಪ್ರೋಸೋಬ್ರ್ಯಾಂಕುಗಳಲ್ಲಿ ಬಾಹ್ಯ ನಿಷೇಚನ ನಡೆಯುತ್ತವೆ. ಅಂಡಗಳು ಒಂಟಿಯಾಗಿರಬಹುದು ಅಥವಾ ಜಿಲ್ಯಾಟಿನ್‍ನಿಂದ ಆವೃತವಾದ ಕುಪ್ಪೆಗಳಂತೆ ಅಥವಾ ಪಟ್ಟೆಗಳಂತೆ ಇರಬಹುದು. ಉಳಿದ ಪ್ರೋಸೋಬ್ರ್ಯಾಂಕುಗಳಲ್ಲಿ, ಒಫಿಸ್ತೊಬ್ರ್ಯಾಂಕುಗಳಲ್ಲಿ, ಸಿಹಿನೀರಿನಲ್ಲಿ ವಾಸಿಸುವ ಪಲ್ಮನೇಟಗಳಲ್ಲಿ ವಿಶಿಷ್ಟರೀತಿಯ ಹಾಗೂ ಉಚ್ಚಮಟ್ಟದ ಅಂಡಪೊರೆಗಳು ಕಾಣಬರುತ್ತವೆ. ಲಿಟ್ಟೊರೈನದ ಅಂಡಗಳಲ್ಲಿ ಆಲ್ಬ್ಯುಮಿನ್ ಪದರವೂ ಒಂದು ಕವಚವೂ ಇದೆ. ಈ ರೀತಿಯ ಅಂಡಗಳು ಜಿಲ್ಯಾಟಿನ್‍ನಿಂದ ಕುಪ್ಪೆಯಂತೆ ಒಂದುಗೂಡಿರುತ್ತವೆ. ಸಿಹಿನೀರಿನಲ್ಲಿ ವಾಸಿಸುವ ಪಲ್ಮನೇಟುಗಳ ಅಂಡಗಳ ಕವಚ ಜಿಲ್ಯಾಟಿನಿನಂತಿದ್ದರೆ ಭೂಚರ ಪಲ್ಮನೇಟುಗಳ ಅಂಡಗಳ ಸುತ್ತ ಸುಣ್ಣಕಲ್ಲಿನ ಕವಚ ಇದೆ. ಇದು ಮೊಟ್ಟೆಯಿಂದ ನೀರು ಹೊರಹೋಗದಂತೆ ಕಾಪಾಡುತ್ತದೆ.

ಗ್ಯಾಸ್ಟ್ರಾಪೊಡಗಳ ಬೆಳವಣಿಗೆಯಲ್ಲಿ ಡಿಂಭಾವಸ್ಥೆಗಳಿವೆ. ಕೆಳದರ್ಜೆಯ ಆರ್ಕಿಗ್ಯಾಸ್ಟ್ರಾಪೊಡಗಳಲ್ಲಿ ಟ್ರೋಕೋಫೋರ್ ಡಿಂಭ ಇದೆ. ಆದರೆ ಉಳಿದವುಗಳಲ್ಲಿ ಈ ಅವಸ್ಥೆ ಮೊಟ್ಟೆಯೊಳಗೆ ಪೂರ್ಣಗೊಳ್ಳುತ್ತದೆ. ಕಡಲ ಗ್ಯಾಸ್ಟ್ರಾಪೊಡಗಳಲ್ಲಿ ಸ್ವತಂತ್ರವಾಗಿ ಈಜಬಲ್ಲ ವೆಲಿಜರ್ ಡಿಂಭ ಉಂಟು. ಇದು ಅತಿ ಕ್ಲಿಷ್ಟರೀತಿಯ ಡಿಂಭ. ಇದರಲ್ಲಿ ಅರ್ಧ ಚಂದ್ರಾಕೃತಿಯ ಎರಡು ಹಾಳೆಗಳುಳ್ಳ, ಶಿಲಕಗಳಿಂದ ಕೂಡಿದ ಮತ್ತು ಈಜಲು ಸಹಾಯಕವಾದ ವೀಲಮ್ ಎಂಬ ಅಂಗವಿದೆ. ಇದು ಟ್ರೋಕೋಫೋರ್‍ಡಿಂಭದ ಪ್ರೋಟಓಟ್ರೋಕಿನ ಮುಂಚಾಚಿದ ರಚನೆಯಾಗಿ ಬೆಳೆದುಕೊಂಡಿದೆ. ಉಳಿದ ರಚನೆಗಳು ವೆಲಿಜರ್ ಡಿಂಭದ ಬೆಳವಣಿಗೆಯ ಹಂತದಲ್ಲಿ ನಾನಾ ಮಾರ್ಪಾಟುಗಳನ್ನು ತೋರುತ್ತವೆ. ಪಾದ, ಕಣ್ಣು, ಕರಬಳ್ಳಿಗಳು ಹುಟ್ಟಿಕೊಳ್ಳುತ್ತವೆ. ಟ್ರೋಕೋಫೋರ್ ಸ್ಥಿತಿಯಲ್ಲಿ ಹುಟ್ಟಿನಿಂದ ಚಿಪ್ಪು ವೆಲಿಜರ್ ಹಂತದಲ್ಲಿ ಸುರುಳಿಯಂತೆ ಸುತ್ತಿಕೊಳ್ಳುತ್ತದೆ. ಇದಕ್ಕೆ ಕಾರಣ ಈ ಜೀವಿಯ ಅಸಮ ಬೆಳವಣಿಗೆ. ಬಾಯ ಒಳರಚನೆಗಳು, ಜಠರ ಹಾಗೂ ರಿಟ್ರ್ಯಾಕ್ಟರ್ ಸ್ನಾಯುಗಳು ಕ್ರಮೇಣ ಬೆಳೆದುಕೊಳ್ಳುತ್ತವೆ. ವೆಲಿಜರ್ ಹಂತದಲ್ಲಿ ನುಲಿಗೆ ಕ್ರಿಯೆ ಪ್ರಾರಂಭವಾಗುವುದರಿಂದ ಚಿಪ್ಪು ಹಾಗೂ ಅಂಗಸರಾಶಿಗಳು 1800  ಗಳಷ್ಟು ತಿರುಚಿಕೊಳ್ಳುತ್ತವೆ.
ನುಲಿಗೆ ಕೇವಲ ಕೆಲವೇ ಮಿನಿಟುಗಳಲ್ಲಿ ಮುಗಿದುಹೋಗಬಹುದು (ಏಕ್ಮೀಯದಲ್ಲಿ ಈ ಕ್ರಿಯೆ ಕೇವಲ 3 ಮಿನಿಟುಗಳಲ್ಲಿ ನಡೆಯುತ್ತದೆ.) ಇಲ್ಲವೇ ಹಲವು ದಿವಸಗಳಲ್ಲಿ ಪೂರ್ಣವಾಗಬಹುದು. (ಉದಾಹರಣೆಗೆ, ಪೋಮಾಟಿಯಾಸಿನಲ್ಲಿ 20 ದಿವಸಗಳು ಹಿಡಿಯುತ್ತವೆ.) ಹ್ಯಾಲಿಯೋಟಿಸ್, ಪಟೆಲ ಮುಂತಾದವುಗಳಲ್ಲಿ ಇದು ಎರಡು ಹಂತಗಳಲ್ಲಿ ನಡೆಯುತ್ತದೆ. ಮೊದಲನೆಯದು ಶೀಘ್ರಗತಿಯಲ್ಲೂ ಎರಡನೆಯದು ನಿಧಾನವಾಗಿಯೂ ನಡೆಯುತ್ತವೆ. ನುಲಿಗೆಯಿಂದಾಗಿ ಪಾದ ಹೊರಚಾಚಿಕೊಳ್ಳುತ್ತದೆ. ಈಗ ಡಿಂಭ ವೀಲಮಿನಿಂದ ಈಜಲು, ಪಾದದಿಂದ ತೆವಳಲು ಉಪಕ್ರಮಿಸುತ್ತದೆ. ಡಿಂಭ ಬೆಳೆದಂತೆ ವೀಲಮ್ ಕ್ಷೀಣವಾಗುತ್ತ ಬಂದು ಕೊನೆಗೆ ಮಾಯವಾಗುತ್ತದೆ. ಮರಿಯನ್ನೇ ಈಯುವ ಕೆಲವು ಗ್ಯಾಸ್ಟ್ರಾಪೊಡಗಳಲ್ಲಿ ಡಿಂಭಾವಸ್ಥೆಗಳು ತಾಯಿಯ ದೇಹದೊಳಗೇ ನಡೆಯುತ್ತವೆ. ಉದಾ: ಲಿಟ್ಟೊರೈನದ ಕೆಲವು ಪ್ರಭೇದಗಳು.

ಆರ್ಥಿಕ ಪ್ರಾಮುಖ್ಯ : ಗ್ಯಾಸ್ಟ್ರಾಪೊಡಗಳು ಇತರ ಜೀವಿಗಳಿಗೆ ಆಹಾರವೆನಿಸಿವೆ. ಕ್ಯಾಲಿಪೋರ್ನಿಯದಲ್ಲಿ ಜನ ಹ್ಯಾಲಿಯೋಟಿಸ್ಸನ್ನು ತಿನ್ನುತ್ತಾರೆ. ಯೂರೋಪಿನಲ್ಲಿ ಹೆಲಿಕ್ಸ್ ಪೋಮೇಟಿಯ ಎಂಬ ಬಸವನಹುಳು ರಸಭಕ್ಷ್ಯವೆನಿಸಿದೆ. ಆದರೂ ಗ್ಯಾಸ್ಟ್ರಾಪೊಡಗಳಿಂದ ಮನುಷ್ಯನಿಗೆ ಸಾಕಷ್ಟು ಹಾನಿಯೂ ಉಂಟು. ಕೆಲವು ಬಸವನ ಹುಳುಗಳು ಅನೇಕ ಬಗೆಯ ರೋಗಗಳನ್ನು ಹರಡುವ ಮಧ್ಯವರ್ತಿ ಆತಿಥೇಯ ಜೀವಿಗಳಾಗಿವೆ. ಇನ್ನು ಕೆಲವು ಬಗೆಗಳು ಸಸ್ಯ ಪಿಡುಗುಗಳೆನಿಸಿಕೊಂಡಿವೆ.

ವರ್ಗೀಕರಣ : ಗ್ಯಾಸ್ಟ್ರಾಪೊಡವರ್ಗವನ್ನು ಕಿವಿರು ಮತ್ತು ನರಮಂಡಲದ ಲಕ್ಷಣಗಳ ಆಧಾರದ ಮೇಲೆ ಪ್ರೋಸೋಬ್ರ್ಯಾಂಕಿಯ, ಒಫಿಸ್ತೊಬ್ರ್ಯಾಂಕಿಯ ಮತ್ತು ಪಲ್ಮನೇಟ ಎಂಬ ಮೂರು ಉಪವರ್ಗಗಳನ್ನಾಗಿ ವಿಂಗಡಿಸಲಾಗಿದೆ.

ಉಪವರ್ಗ I ಪ್ರೋಸೋಬ್ರ್ಯಾಂಕಿಯ (ಸ್ಟ್ರೆಪ್ಟನ್ಯೂರ) : ಇದಕ್ಕೆ ಸೇರಿದ ಶಂಭುಕಗಳು ಸಿಹಿನೀರು ಹಾಗೂ ಸಮುದ್ರಗಳೆರಡರಲ್ಲಿಯೂ ವಾಸಿಸುತ್ತವೆ. ಇವುಗಳಲ್ಲಿ ಉಸಿರಾಡಲು ಕಿವಿರುಗಳಿವೆ. ಇವುಗಳ ಮ್ಯಾಂಟಲ್ ಕುಹರ ಹಾಗೂ ಅದರೊಳಗಿನ ಅಂಗಗಳು ದೇಹದ ಮುಂಭಾಗಕ್ಕೆ ಸೀಮಿತಗೊಂಡಿವೆ. ಈ ಉಪವರ್ಗದ ಜೀವಿಗಳಲ್ಲಿ ಚಿಪ್ಪು ಇದೆ. ಇದರಲ್ಲಿ ಆರ್ಕಿಗ್ಯಾಸ್ಟ್ರಾಪೊಡ, ಮೀಸೊ ಗ್ಯಾಸ್ಟ್ರಾಪೊಡ, ನಿಯೋಗ್ಯಾಸ್ಟ್ರಾಪೊಡಗಳೆಂಬ ಮೂರು ಗಣಗಳಿವೆ.
ಗಣ 1 ಆರ್ಕಿಗ್ಯಾಸ್ಟ್ರಾಪೊಡ (ಆಸ್ಪಿಡೋಬ್ರ್ಯಾಂಕಿಯ : ಈ ಗಣದ ಜೀವಿಗಳು ಆದಿಮಸ್ಥಿತಿಯವು. ಇವುಗಳಲ್ಲಿ ಎರಡು ಕಿವಿರುಗಳು, ಎರಡು ಹೃತ್ಕರ್ಣಗಳು ಮತ್ತು ಎರಡು ಮೂತ್ರಕೋಶಗಳು ಇವೆ. ನರಮಂಡಲ ಕೇಂದ್ರಿಕೃತಗೊಂಡಿಲ್ಲ. ಚಿಪ್ಪು ನುಲಿಗೆಗೊಳಗಾಗಿದೆ. ಕೆಲವು ಜೀವಿಗಳಲ್ಲಿ ದ್ವಿತೀಯಕ ಸಮಪಾಶ್ರ್ವಸ್ಥಿತಿಯನ್ನು ಕಾಣಬಹುದು. ಚಿಪ್ಪಿನಲ್ಲಿ ರಂದ್ರಗಳಿವೆ. ಉದಾಹರಣೆಗೆ ಸಿಸ್ಸುರೆಲ, ಹ್ಯಾಲಿಯೋಟಿಸ್, ಪಂಕ್‍ಟ್ಯುರೆಲ, ಡಯೋಡೋರ, ಪಟೆಲ, ನೆರೀಟ ಮುಂತಾದವು.
ಗಣ 2 ಮಿಸೊಗ್ಯಾಸ್ಟ್ರಾಪೊಡ (ಪೆಕ್ಟಿನಿಬ್ರ್ಯಾಂಕಿಯ : ಈ ಗಣದ ಜೀವಿಗಳಲ್ಲಿ ಕೇವಲ ಒಂದು ಕಿವಿರು, ಒಂದು ಹೃತ್ಕರ್ಣ ಮತ್ತು ಒಂದು ಮೂತ್ರಕೋಶ ಇವೆ. ಬಲಭಾಗದ ಕಿವಿರು, ಹೃತ್ಕರ್ಣ ಮತ್ತು ಮೂತ್ರಕೋಶಗಳು ಮಾಯವಾಗಿವೆ. ಒಪರ್‍ಕ್ಯುಲಮ್ ಇರಬಹುದು. ಸೊಂಡಿಲು ಇದೆ. ಇವೆಲ್ಲ ಪ್ರಮುಖವಾಗಿ ಸಮುದ್ರ ಜೀವಿಗಳು. ಸಿಹಿನೀರಿನ ಜಾತಿಗಳು ಇಲ್ಲದಿಲ್ಲ. ಗ್ಯಾಸ್ಟ್ರಾಪೊಡ ವರ್ಗದಲ್ಲಿಯೇ ಈ ಗಣ ಅತಿ ದೊಡ್ಡದು. ಉದಾಹರಣೆಗೆ ಲಿಟ್ಟೊರೈನ, ಜಾಂತಿನ, ಕ್ರೆಪಿಡ್ಯುಲ, ಸ್ಟ್ರಾಂಬಸ್, ಲ್ಯಾಂಬಿಸ್, ಕೊರೆಯುವ ನಾಟಿಸಿಡುಗಳಾದ ನಾಟಿಕ, ಸೈನಮ್ ಮುಂತಾದವು. ಈಜುವ ಹೆಟರಾಪೊಡಗಳಾದ ಅಟ್ಲಾಂಟ, ಕ್ಯಾರಿನೇರಿಯ, ಜಂತು ಕಂಬಗಳಾದ ವರ್ಮಿಟಸ್ ಹಾಗೂ ಸಿಹಿನೀರಿನಲ್ಲಿ ಕಾಣಸಿಗುವ ವೈವಿಪ್ಯಾರಸ್, ಹೈಡ್ರೋಬಿಯ, ಗೋನಿಯೋಬೇಸಿಸ್ ಮುಂತಾದವು.

ಗಣ 3 ನಿಯೋಗ್ಯಾಸ್ಟ್ರಾಪೊಡ (ಸ್ಟೀನೊಗ್ಲಾಸ) : ಈ ಗಣದ ಜೀವಿಗಳಲ್ಲಿ ಮೀಸೊಗ್ಯಸ್ಟ್ರಾಪೊಡಗಳಲ್ಲಿಲ್ಲದ ಕೆಲವು ಗುಣಗಳನ್ನು ಕಾಣಬಹುದು. ಇವುಗಳಲ್ಲಿ ಆಸ್ಫ್ರಾಡಿಯಮ್ ಬೈಪೆಕ್ಟಿನೇಟ್ ಸ್ಥಿತಿಯಲ್ಲಿದೆ. ನರಮಂಡಲ ಕೇಂದ್ರೀಕೃತವಾಗಿದೆ. ಚಿಪ್ಪಿನಲ್ಲಿ ಸಾಮಾನ್ಯವಾಗಿ ಸೈಫನ್ ಕಾಲುವೆ ಇದೆ. ಮಾಂಸಾಹಾರಿಗಳಲ್ಲಿ ಸೊಂಡಿಲು ಇದೆ. ರ್ಯಾಡ್ಯುಲದಲ್ಲಿ ಎರಡು ಅಥವಾ ಮೂರು ಬಲು ಅಗಲವಾದ ಹಲ್ಲುಗಳಿರುವ ಸಾಲಿದೆ. ಕೆಲವು ಜೀವಿಗಳಲ್ಲಿ ವಿಷಗ್ರಂಥಿಗಳಿವೆ. ಸಾಮಾನ್ಯವಾಗಿ ಎಲ್ಲ ಜೀವಿಗಳಲ್ಲೂ ಒಪರ್‍ಕ್ಯುಲಮ್ ಇದೆ. ಇದಕ್ಕೆ ಸೇರಿದ ಎಲ್ಲ ಪ್ರಭೇದಗಳೂ ಕಡಲ ಜೀವಿಗಳು. ಉದಾಹರಣೆಗೆ ಕೊರೆಯುವ ಮ್ಯೂರಿಸಿಡುಗಳಾದ ಮ್ಯೂರೆಕ್ಸ್, ಯೂರೊಸ್ಯಾಲ್‍ಪಿಂಕ್ಸ್ ಮತ್ತು ಪರಪ್ಯುರ, ಬ್ಯೂಸಿಕಾನ್, ಒಳಿವ, ಮಿಟ್ರ, ಕೋನಸ್ ಮುಂತಾದವು.

ಉಪವರ್ಗ II ಒಫಿಸ್ತೊಬ್ರ್ಯಾಂಕಿಯ (ಯೂಥಿನ್ಯೂರ : ಇವುಗಳಲ್ಲಿ ಒಂದು ಹೃತ್ಕರ್ಣ ಹಾಗೂ ಮೂತ್ರಕೋಶ ಇವೆ. ಈ ಉಪವರ್ಗದ ಜೀವಿಗಳಲ್ಲಿ ವಿನುಲಿಗೆ ಕ್ರಿಯೆ ನಾನಾ ಹಂತದಲ್ಲಿರುವುದು ಕಂಡುಬರುತ್ತದೆ. ಜೊತೆಗೆ ಚಿಪ್ಪಿನ ಹಾಗೂ ಮ್ಯಾಂಟಲ್ ಕುಹರದ ಕ್ಷೀಣತೆಗಳೂ ಈ ಜೀವಿಗಳಲ್ಲಿ ನಾನಾ ಹಂತಗಳಲ್ಲಿ ಕಂಡುಬರುತ್ತವೆ. ಎಲ್ಲ ಪ್ರಭೇದಗಳೂ ಸಮುದ್ರಜೀವಿಗಳು. ಇದರಲ್ಲಿ ಟೆಕ್ಟಿಬ್ರ್ಯಾಂಕಿಯ, ಟೀರಾಪೊಡ, ನ್ಯೂಡಿಬ್ರ್ಯಾಂಕಿಯಗಳೆಂಬ ಮೂರು ಗಣಗಳಿವೆ.

ಗಣ 1 ಟೆಕ್ಟಿಬ್ರ್ಯಾಂಕಿಯ : ಚಿಪ್ಪು ಇದೆ. ಇದು ಕ್ಷೀಣಿಸಿರಬಹುದು. ಮತ್ತು ಇದರ ಮೇಲೆ ಮ್ಯಾಂಟಲ್ ಬೆಳೆದಿದ್ದು ಮುಚ್ಚಿಕೊಂಡಿರಬಹುದು. ನಿಜವಾದ ಒಂದೇ ಕಿವಿರಿದೆ. ಕೆಲವು ಜೀವಿಗಳಲ್ಲಿ ದ್ವಿತೀಯಕ ಸಮಪಾಶ್ರ್ವ ಸ್ಥಿತಿಯನ್ನು ಕಾಣಬಹುದು. ಉದಾಹರಣೆಗೆ ಬುಲ, ಅಪ್ಲೀಸಿಯ, ಪರತಂತ್ರ ಜೀವಿಗಳಾದ ಪಿರಮಿಡೆಲ, ಸ್ಟೈಲಿಫೆರ ಮುಂತಾದವು.

ಗಣ 2 ಟೀರಾಪೊಡ : ಈ ಗಣದ ಜೀವಿಗಳನ್ನು ಕಡಲ ಚಿಟ್ಟೆಗಳೆಂದು ಕರೆಯುತ್ತಾರೆ. ಚಿಪ್ಪು ಇರಬಹುದು ಅಥವಾ ಇಲ್ಲದಿರಬಹುದು. ಪಾದದ ಮುಂದಿನ ಭಾಗ ಬಹಳ ಅಗಲವಾಗಿದ್ದು ಈಜುರೆಕ್ಕೆಗಳಾಗಿ ಮಾರ್ಪಟ್ಟಿದೆ. ಈ ಗಣದ ಉಪಗಣವಾದ ಥೀಕೊಸೊಮ್ಯಾಟದ ಪ್ರಭೇದಗಳಲ್ಲಿ ಚಿಪ್ಪಿಲ್ಲ. ಉದಾ : ಸ್ಟೈರಟಿಲ, ಕ್ಲಿಯೋ, ಲಿಮಾಸೈನ ಇತ್ಯಾದಿ. ಉಪಗಣ ಜಿಮ್ನೊಸೊಮ್ಯಾಟದ ಜೀವಿಗಳಲ್ಲಿ ಚಿಪ್ಪು ಇಲ್ಲ. ಉದಾ : ನ್ಯೂಮೊಡರ್ಮ, ಕ್ಲೈಯೊಪ್ಸಿಸ್ ಮತ್ತು ನೋಟೊಬ್ರ್ಯಾಂಕಿಯ.

ಗಣ 3 ನ್ಯೂಡಿಬ್ರ್ಯಾಂಕಿಯ : ಇವನ್ನು ಕಡಲ ಗೊಂಡೇಹುಳುಗಳೆಂದು ಕರೆಯುತ್ತಾರೆ. ಇವುಗಳಲ್ಲಿ ಚಿಪ್ಪು ಇಲ್ಲ. ದೇಹ ದ್ವಿತೀಯಕ ಸಮಪಾಶ್ರ್ವ ಸ್ಥಿತಿಯನ್ನು ಗಳಿಸಿಕೊಂಡಿದೆ. ಮ್ಯಾಂಟಲ್ ಕುಹರವಾಗಲೀ ನಿಜವಾದ ಕಿವಿರುಗಳಾಗಲೀ ಇಲ್ಲ. ಉಸಿರಾಟ ದೇಹದ ಭಿತ್ತಿಯ ಸಹಾಯದಿಂದ ನಡೆಯುತ್ತವೆ. ಗುದದ್ವಾರದ ಸುತ್ತಲೂ ಸೆರೇಟಗಳು (ದ್ವಿತೀಯಕ ಕಿವಿರುಗಳು) ಬೆಳೆದಿವೆ. ಜೀರ್ಣ ಗ್ರಂಥಿ ವಿಪುಲವಾಗಿ ಕವಲೊಡೆದಿದ್ದು ದೇಹದ ಅವಕಾಶದೊಳಗೆಲ್ಲ ತುಂಬಿಕೊಂಡಿದೆ. ನರಮಂಡಲ ಕೇಂದ್ರಕೃತಗೊಂಡಿದೆ. ಎರಡನೆಯ ಜೊತೆ ಕರಬಳ್ಳಿಗಳು ರೈನೋಫೋರುಗಳಾಗಿ ಮಾರ್ಪಾಟುಗೊಮಡಿವೆ. ಉದಾ : ಡೋರಿಸ್, ಡೆಂಡ್ರೋ ನೋಟಸ್, ಎಲೀಸಿಯ ಮತ್ತು ಇಯೋಲಿಡಿಯ.

ಉಪವರ್ಗ III ಪಲ್ಮನೇಟ : ಇವುಗಳಲ್ಲಿ ಒಂದು ಹೃತ್ಕರ್ಣ ಹಾಗೂ ಒಂದು ಮೂತ್ರಕೋಶ ಇವೆ. ಕಿವಿರುಗಳು ಇಲ್ಲ. ಮ್ಯಾಂಟಲ್ ಕುಹರದ ಮುಂಭಾಗ ಅನೇಕ ರಕ್ತನಾಳನ್ನೊಳಗೊಂಡಿದ್ದು ಗಾಳಿಯ ಉಸಿರಾಟಕ್ಕೂ ದ್ವಿತೀಯಕವಾಗಿ ನೀರಿನ ಉಸಿರಾಟಕ್ಕೂ ಮಾರ್ಪಾಟುಗೊಂಡಿದೆ. ನರಮಂಡಲ ಸಮಪಾಶ್ರ್ವ ಸ್ಥಿತಿಯಲ್ಲಿದ್ದು ಕೇಂದ್ರಿಕೃತಗೊಂಡಿದೆ. ಸಾಮಾನ್ಯವಾಗಿ ಚಿಪ್ಪು ಇರುತ್ತದೆ. ಒಪರ್‍ಕ್ಯುಲಮ್ ಇಲ್ಲ. ಇವು ಉಭಯಲಿಂಗಿಗಳು. ಬೆಳವಣಿಗೆ ನೇರ ಬಗೆಯದು. ಈ ಉಪವರ್ಗದ ಜೀವಿಗಳು ಭೂಮಿಯ ಮೇಲೂ ಸಿಹಿನೀರಿನಲ್ಲೂ ವಾಸಿಸುತ್ತವೆ. ಕೆಲವು ಮಾತ್ರ ಕಡಲಜೀವಿಗಳು. ಈ ಉಪವರ್ಗದಲ್ಲಿ ಸ್ಟೈಲೋಮ್ಯಟೊಫೋರ ಹಾಗೂ ಬೇಸೋಮ್ಯಾಟೋಫೋರ ಎಂಬ ಎರಡು ಗಣಗಳಿವೆ.

ಗಣ 1 ಸ್ಟೈಲೋಮ್ಯಟೊಫೋರ : ಇದಕ್ಕೆ ಸೇರಿದ ಜೀವಿಗಳಲ್ಲಿ ಎರಡು ಜೊತೆ ಕರಬಳ್ಳಿಗಳಿವೆ. ಕಣ್ಣುಗಳು ಹಿಂದಿನ ಜೊತೆ ಕರಬಳ್ಳಿಗಳ ತುದಿಯಲ್ಲಿವೆ. ಇವೆಲ್ಲವೂ ಭೂವಾಸಿಗಳು. ಹೆಲಿಕ್ಸ್, ಪಾಲಿಗೈರ, ಜೆನೆಲ, ಲೈಮ್ಯಾಕ್ಸ್, ರೆಟಿನೆಲ, ಪ್ಯೂಪ ಮುಂತಾದವು ಇದರ ಉದಾಹರಣೆಗಳು.

ಗಣ 2 ಬೇಸೋಮ್ಯಾಟೋಫೋರ ಈ ಗಣದ ಜೀವಿಗಳಲ್ಲಿ ಒಂದೇ ಒಂದು ಜೊತೆ ಕರಬಳ್ಳಿಗಳಿವೆ. ಕಣ್ಣುಗಳು ಕರಬಳ್ಳಿಗಳ ಬುಡದಲ್ಲಿವೆ. ಈ ಗಣದ ಎಲ್ಲ ಜೀವಿಗಳೂ ಸಿಹಿನೀರಿನಲ್ಲಿ ವಾಸಿಸುವಂಥವು. ನೇರವಾಗಿ ಗಾಳಿಯನ್ನೇ ಉಸಿರಾಡುತ್ತವಾದರೂ ಕೆಲವು ಬಗೆಯವು ನೀರನ್ನು ಮ್ಯಾಂಟಲ್ ಕುಹರದೊಳಕ್ಕೇ ತೆಗೆದುಕೊಂಡು ಉಸಿರಾಡುವುದುಂಟು. ಕೆಲವು ಜೀವಿಗಳಲ್ಲಿ ದ್ವಿತೀಯಕ ಕಿವಿರುಗಳಿವೆ. ಉದಾ : ಲಿಮ್ನೀಯ, ಪ್ಲನೋರಬಿಸ್, ಫೈಸ, ಆಂಕೈಲಸ್ ಮುಂತಾದವು.
(ಎಲ್.ಎಸ್.ಜಿ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ